ಬೆಂಗಳೂರು: ‘ಕೋವಿಡ್-19’ ಗಲಾಟೆಗಳಿಂದ ಪಾರಾಗಲು ಬೌನ್ಸರ್ ಗಳ ಮೊರೆ ಹೋದ ಖಾಸಗಿ ಆಸ್ಪತ್ರೆ !

Update: 2020-10-21 17:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.21: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಎಲ್ಲರಿಗೂ ಚಿಕಿತ್ಸೆ ಸಾಧ್ಯವಾಗದಿರುವುದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೊಂದಿಗಿನ ಸಂಘರ್ಷದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಆಸ್ಪತ್ರೆಗಳು ತಮ್ಮ ಸಿಬ್ಬಂದಿ ರಕ್ಷಣೆಗಾಗಿ ಬೌನ್ಸರ್ ಗಳ ಮೊರೆ ಹೋಗಿವೆ.

ಇಲ್ಲಿನ ತುಮಕೂರು ರಸ್ತೆಯ ನಾಗಸಂದ್ರದ 8ನೇ ಮೈಲಿ ಬಳಿಯಿರುವ ಪ್ರಕ್ರಿಯಾ ಆಸ್ಪತ್ರೆಯು ತನ್ನ ಸಿಬ್ಬಂದಿ ಮತ್ತು ಮೂಲಸೌಕರ್ಯಗಳಿಗೆ ದಾಳಿಯ ವೇಳೆ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣದಿಂದ ರಕ್ಷಣೆಗಾಗಿ ಬೌನ್ಸರ್‌ಗಳನ್ನು ನೇಮಿಸಿಕೊಂಡಿದೆ. ಇದೊಂದು ವಿಚಿತ್ರ ಎನಿಸಿದರು, ಪ್ರಸ್ತುತ ಸನ್ನಿವೇಶದಲ್ಲಿ ಅದರ ಅವಶ್ಯಕತೆ ತುಂಬಾ ಇದೆ ಎನ್ನುತ್ತಾರೆ ಆಸ್ಪತ್ರೆಯ ಆಡಳಿತ ಮಂಡಳಿಯವರು.

‘ಈ ವ್ಯವಸ್ಥೆಯನ್ನು ಕೆಲವು ದಿನಗಳ ಮಟ್ಟಿಗೆ ಮಾಡಿಕೊಳ್ಳಬೇಕಾಗಿದೆ. ಕೆಲವೊಮ್ಮೆ ರೋಗಿಗಳಿಗೆ ಹಾಸಿಗೆ (ಬೆಡ್) ಸಿಗದಿದ್ದಾಗ, ಅವರ ಕಡೆಯವರು ಅನಗತ್ಯವಾಗಿ ದಾಳಿ ಮಾಡುವ ಸಂದರ್ಭಗಳು ಎದುರಾಗುತ್ತಿವೆ. ಕೊನೆಯ ಕ್ಷಣದಲ್ಲಿ ತುಂಬಾ ಗಂಭೀರ ಸ್ಥಿತಿಯಲ್ಲಿ ರೋಗಿಗಳನ್ನು ಕರೆದುಕೊಂಡು ಬಂದರೆ ನಮಗೂ ಜೀವ ರಕ್ಷಿಸುವುದು ತುಂಬಾ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರೋಗಿಗಳ ಕಡೆಯವರು ಪರಿಸ್ಥಿತಿ ಯನ್ನು ಅರ್ಥ ಮಾಡಿಕೊಳ್ಳದೆ, ಆಸ್ಪತ್ರೆಯವರನ್ನು ಹೊಣೆಗಾರರನ್ನಾಗಿ ಮಾಡುವ ಸಂದರ್ಭಗಳು ಘಟಿಸುತ್ತಿವೆ. ಆ ಕಾರಣಕ್ಕಾಗಿ ಮುಂಜಾಗ್ರತಾ ದೃಷ್ಟಿಯಿಂದ ಈ ವ್ಯವಸ್ಥೆಯನ್ನ ಮಾಡಿಕೊಳ್ಳಲಾಗಿದೆ’ ಎಂದು ಆಸ್ಪತ್ರೆಯ ಸಿಇಒ ಡಾ.ಶ್ರೀನಿವಾಸ ಚಿರುಕುರಿ ಹೇಳಿದ್ದಾರೆ.

ಬೌನ್ಸರ್‌ಗಳನ್ನು ನಾವು ಹೆಚ್ಚು ದಿನ ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ ಇಬ್ಬರು ಬೌನ್ಸರ್‌ಗಳಿಗೆ ತಿಂಗಳಿಗೆ 3 ಲಕ್ಷ ರೂ. ಪಾವತಿಸಬೇಕಾಗು ತ್ತದೆ. ಈ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಸಂಘವು ಪ್ರತಿ ಆಸ್ಪತ್ರೆಗೂ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯಮಿಸು ವಂತೆ ಸರಕಾರವನ್ನು ಒತ್ತಾಯಿಸಿದೆ. ‘ರೋಗಿಯೊಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಆದರೆ, ಅವರ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬುದು ಸತ್ಯವಾದರೂ, ನಾವು ಅವರ ಪ್ರಾಣ ರಕ್ಷಣೆಗಾಗಿ ಮಾಡಿದ ಪ್ರಯತ್ನ, ಚಿಕಿತ್ಸಾ ವೆಚ್ಚ ಎಲ್ಲವೂ ಪರಿಗಣಿಸಲೇಬೇಕಾಗುತ್ತದೆ. ಇದನ್ನು ರೋಗಿಗಳ ಸಂಬಂಧಿ ಅರ್ಥಮಾಡಿಕೊಂಡರೆ ನಾವು ನಿರಾತಂಕವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ ಎಂದು ಆಸ್ಪತ್ರೆಯ ಮುಖ್ಯಸ್ಥರ ಅನಿಸಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News