ಭಾರತದಲ್ಲಿ ಮಾನವ ಹಕ್ಕು ಕಾರ್ಯಕರ್ತರ ಬಂಧನ, ಎನ್‌ಜಿಒಗಳಿಗೆ ನಿರ್ಬಂಧ ಕುರಿತು ವಿಶ್ವಸಂಸ್ಥೆ ಕಳವಳ

Update: 2020-10-21 17:50 GMT
Photo: twitter.com/mbachelet/photo

 ಹೊಸದಿಲ್ಲಿ,ಅ.21: ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಭಾರೀ ಒತ್ತಡಗಳಿಗೆ ಸಿಲುಕಿರುವ ಮಾನವ ಹಕ್ಕುಗಳ ಕಾರ್ಯಕರ್ತರ ರಕ್ಷಣೆಗೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾನವ ಹಕ್ಕುಗಳಿಗಾಗಿ ವಿಶ್ವಸಂಸ್ಥೆಯ ರಾಯಭಾರಿ ಮಿಷೆಲ್ ಬ್ಯಾಚಲೆಟ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಕಾರ್ಯಕರ್ತರ ಬಂಧನಗಳು ಮತ್ತು ಎನ್‌ಜಿಒಗಳ ಕಾರ್ಯ ನಿರ್ವಹಣೆಯ ಮೇಲೆ ನಿರ್ಬಂಧಗಳಿಗೆ ಕಾರಣವಾಗಿರುವ ಮೂರು ‘ಸಮಸ್ಯಾತ್ಮಕ ’ಭಾರತೀಯ ಕಾನೂನುಗಳನ್ನು ಬ್ಯಾಚಲೆಟ್ ಅವರ ಕಚೇರಿಯು ಬೆಟ್ಟುಮಾಡಿದೆ.

ಸಾರ್ವಜನಿಕ ಹಿತಾಸಕ್ತಿಗೆ ಹಾನಿಯನ್ನುಂಟು ಮಾಡುವ ಯಾವುದೇ ಚಟುವಟಿಕೆಗಳಿಗೆ ವಿದೇಶಿ ನಿಧಿಯ ಸ್ವೀಕೃತಿಯನ್ನು ನಿಷೇಧಿಸುವ ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಸೇರಿದಂತೆ ನಾಗರಿಕ ಸಮಾಜದಲ್ಲಿಯ ಧ್ವನಿಗಳನ್ನು ಅಡಗಿಸಲು ಹೆಚ್ಚಾಗಿ ಬಳಕೆಯಾಗುತ್ತಿರುವ ವಿದೇಶಿ ದೇಣಿಗೆಗಳನ್ನು ನಿಯಂತ್ರಿಸುವ,ಅಸ್ಪಷ್ಟ ಶಬ್ದಗಳಿಂದ ಕೂಡಿರುವ ಕಾನೂನುಗಳ ಬಗ್ಗೆ ಖೇದ ವ್ಯಕ್ತಪಡಿಸಿರುವ ಬ್ಯಾಚಲೆಟ್,ಎನ್‌ಜಿಒ ಕಚೇರಿಗಳ ಮೇಲೆ ಅಧಿಕೃತ ದಾಳಿಗಳು ಮತ್ತು ಬ್ಯಾಂಕ್ ಖಾತೆಗಳ ಸ್ತಂಭನ ಸೇರಿದಂತೆ ಹಲವಾರು ಅತ್ಯಂತ ಗೊಂದಲಮಯ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ವರ್ಷಗಳಿಂದಲೂ ಎಫ್‌ಸಿಆರ್‌ಎ ಅನ್ನು ಹೇರಲಾಗುತ್ತಿದೆ. ಅಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿರುವ ‘ಸಾರ್ವಜನಿಕ ಹಿತಾಸಕ್ತಿ ’ಯ ಆಧಾರದಲ್ಲಿ ಇಂತಹ ಕ್ರಮಗಳು ಈ ಕಾನೂನನ್ನು ದುರ್ಬಳಕೆಗೆ ಮುಕ್ತವಾಗಿಸಿವೆ ಮತ್ತು ಅದನ್ನು ಅಧಿಕಾರಿಗಳು ಟೀಕಾತ್ಮಕವಾಗಿ ಭಾವಿಸುವ ಮಾನವ ಹಕ್ಕು ವರದಿಗಾರಿಕೆ ಮತ್ತು ಪ್ರತಿಪಾದನೆಗಳಿಗಾಗಿ ಎನ್‌ಜಿಒಗಳನ್ನು ಬೆದರಿಸಲು ಅಥವಾ ದಂಡಿಸಲು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಮಾನವ ಹಕ್ಕು ಕಾರ್ಯಕರ್ತರು ಮತ್ತು ಸಾಮಾಜಿಕ ಹೋರಾಟಗಾರರು,ನಿರ್ದಿಷ್ಟವಾಗಿ ವಿವಾದಾತ್ಮಕ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದವರ ಮೇಲಿನ ಒತ್ತಡಗಳು ಹೆಚ್ಚುತ್ತಿವೆ. ಇಂತಹ ಹಲವಾರು ಹೋರಾಟಗಾರರನ್ನು ಭಯೋತ್ಪಾದನೆ ನಿಗ್ರಹ ಮತ್ತು ಅಂತಹುದೇ ಕಠಿಣ ಕಾನೂನುಗಳಡಿ ಬಂಧಿಸಲಾಗಿದೆ ಎಂದು ಚಿಲಿಯ ಮಾಜಿ ಅಧ್ಯಕ್ಷೆಯೂ ಆಗಿರುವ ಬ್ಯಾಚಲೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ರಚನಾತ್ಮಕ ಟೀಕೆಯು ಪ್ರಜಾಪ್ರಭುತ್ವದ ಜೀವನಾಡಿಯಾಗಿದೆ. ಅಧಿಕಾರಿಗಳಿಗೆ ಅದು ಅಹಿತಕರವೆನ್ನಿಸಿದರೂ ಅಂತಹ ಟೀಕೆಗಳನ್ನು ಎಂದೂ ಈ ರೀತಿಯಾಗಿ ಅಪರಾಧೀಕರಿಸಬಾರದು ಎಂದಿರುವ ಅವರು,ಅಭಿವ್ಯಕ್ತಿ ಸ್ವಾತಂತ್ರ ಮತ್ತು ಶಾಂತಿಯುತ ಸೇರುವಿಕೆಯ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಯಾರೂ ಬಂಧನಕ್ಕೊಳಗಾಗದಂತೆ ನೋಡಿಕೊಳ್ಳುವಂತೆ ಮತ್ತು ಭಾರತದ ಸದೃಢ ನಾಗರಿಕ ಸಮಾಜವನ್ನು ರಕ್ಷಿಸಲು ಅತ್ಯುನ್ನತ ಪ್ರಯತ್ನಗಳನ್ನು ಮಾಡುವಂತೆ ಭಾರತ ಸರಕಾರವನ್ನು ಆಗ್ರಹಿಸಿದ್ದಾರೆ.

ಬ್ಯಾಚಲೆಟ್ ಟೀಕೆಯನ್ನು ತಿರಸ್ಕರಿಸಿರುವ ಕೇಂದ್ರ ಸರಕಾರವು,ಕಾನೂನು ಉಲ್ಲಂಘನೆಗಳನ್ನು ಮಾನವ ಹಕ್ಕುಗಳ ನೆಪದಲ್ಲಿ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ವಿಶ್ವಸಂಸ್ಥೆಯ ಮಂಡಳಿಯಿಂದ ವಿಷಯದಲ್ಲಿ ಹೆಚ್ಚು ತಿಳುವಳಿಕೆಯಿಂದ ಕೂಡಿದ ಅಭಿಪ್ರಾಯವನ್ನು ನಿರೀಕ್ಷಿಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ ಅವರು ಬುಧವಾರ ಇಲ್ಲಿ ತಿಳಿಸಿದರು.

ಈ ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಭಿನ್ನಾಭಿಪ್ರಾಯಗಳ ವಿರುದ್ಧ ದಾಳಿಗಳೊಂದಿಗೆ ಮೋದಿ ನೇತೃತ್ವದಲ್ಲಿ ಭಾರತವು ಹೆಚ್ಚೆಚ್ಚು ಅಸಹಿಷ್ಣುವಾಗುತ್ತಿದೆ. ಆಡಳಿತಾರೂಢ ಬಿಜೆಪಿಯ ನಾಯಕರು ಮತ್ತು ಬೆಂಬಲಿಗರು ಭಿನ್ನಾಭಿಪ್ರಾಯಗಳನ್ನು ಹೊಂದಿರುವವರು ಮತ್ತು ಮಾನವ ಹಕ್ಕು ಹೋರಾಟಗಾರರನ್ನು ದೇಶದ್ರೋಹಿಗಳೆಂದು ಬಿಂಬಿಸುವುದು ಮಾಮೂಲಾಗಿಬಿಟ್ಟಿದೆ ಎನ್ನುವುದು ಟೀಕಾಕಾರರ ಅಭಿಪ್ರಾಯವಾಗಿದೆ.

ಭಯೋತ್ಪಾದನೆಯ ಆರೋಪ ಹೊರಿಸಲ್ಪಟ್ಟಿರುವ ಅತ್ಯಂತ ಹಿರಿಯ ಭಾರತೀಯರಾಗಿರುವ ಕೆಥೋಲಿಕ್ ಧರ್ಮಗುರು ಸ್ಟಾನ್ ಸ್ವಾಮಿ ಸೇರಿದಂತೆ 1,500ಕ್ಕೂ ಅಧಿಕ ಜನರನ್ನು ಬಂಧಿಸಿರುವುದು ವರದಿಯಾಗಿದೆ ಎಂದು ಬ್ಯಾಚಲೆಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News