ವಾಯುಮಾಲಿನ್ಯದಿಂದ ಕಳೆದ ವರ್ಷ ಮೃತಪಟ್ಟವರೆಷ್ಟು ಗೊತ್ತೇ ?

Update: 2020-10-22 03:45 GMT

ಹೊಸದಿಲ್ಲಿ : ಧೀರ್ಘಕಾಲ ಮನೆಗಳಿಂದ ಹೊರಗಿರುವುದು ಮತ್ತು ಮನೆಯೊಳಗಿನ ವಾಯುಮಾಲಿನ್ಯದಿಂದಾಗಿ ಕಳೆದ ವರ್ಷ ಭಾರತ ಸೇರಿದಂತೆ ವಿಶ್ವಾದ್ಯಂತ 16.7 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ.

ಪಾರ್ಶ್ವವಾಯು, ಹೃದ್ರೋಗ, ಮಧುಮೇಹ, ಶ್ವಾಸಕೋಶ ಕ್ಯಾನ್ಸರ್, ತೀವ್ರತರ ಶ್ವಾಸಕೋಶ ಕಾಯಿಲೆ ಮತ್ತು ನವಜಾತ ಶಿಶುಗಳಿಗೆ ಬಂದ ಕಾಯಿಲೆಗಳು ಸೇರಿದಂತೆ ಹಲವು ತೀವ್ರತರ ಸಮಸ್ಯೆಗಳಿಗೆ ವಾಯು ಮಾಲಿನ್ಯ ಕಾರಣವಾಗಿದೆ.

ಬುಧವಾರ ಬಿಡುಗಡೆಯಾದ ’ಸ್ಟೇಟ್ ಆಫ್ ಗ್ಲೋಬಲ್ ಏರ್ 2020’ ವರದಿಯಲ್ಲಿ ಈ ಅಂಕಿ ಅಂಶ ನೀಡಲಾಗಿದೆ. ಒಟ್ಟಾರೆಯಾಗಿ ವಾಯುಮಾಲಿನ್ಯವು ಅಕಾಲಿಕ ಸಾವಿಗೆ ನಾಲ್ಕನೇ ಪ್ರಮುಖ ಕಾರಣವಾಗಿದೆ ಎಂದು ಅಮೆರಿಕದ ಪರಿಸರ ಸಂರಕ್ಷಣೆ ಸಂಸ್ಥೆ, ವಿವಿಧಿ ಪ್ರತಿಷ್ಠಾನ ಗಳು ಮತ್ತು ಅಭಿವೃದ್ಧಿ ಬ್ಯಾಂಕ್‌ಗಳ ಪ್ರಾಯೋಜಿತ ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್ ವರದಿ ಹೇಳಿದೆ.

ಇಡೀ ವಿಶ್ವದಲ್ಲಿ ವಾಯು ಮಾಲಿನ್ಯದಿಂದಾಗಿ ಸಾವಿಗೀಡಾಗುವ ಅಪಾಯ ಸಾಧ್ಯತೆ ಭಾರತದಲ್ಲೇ ಅತ್ಯಧಿಕ ಎಂದು ವರದಿ ಹೇಳಿದೆ. ಮೊಟ್ಟಮೊದಲ ಬಾರಿಗೆ ಎಚ್‌ಇಐ, ನವಜಾತ ಶಿಶುಗಳು ಸೇರಿದಂತೆ ವಿವಿಧ ವಯೋಮಾನದ ಜನರಿಗೆ ವಾಯು ಮಾಲಿನ್ಯದಿಂದಾಗುವ ಅಪಾಯವನ್ನು ಸಮಗ್ರವಾಗಿ ಅಂದಾಜಿಸಿದೆ. ಹೊರಗೆ ಮತ್ತು ಮನೆಯೊಳಗಿನ ಮಾಲಿನ್ಯ ಕಾರಣ ಕಣಗಳು (ಪಿಎಂ) ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ವಾರ್ಷಿಕವಾಗಿ ವಿಶ್ವದಲ್ಲಿ ಐದು ಲಕ್ಷ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರಲ್ಲಿ 1,16,000 ಶಿಶುಗಳು ಭಾರತದಲ್ಲಿ ಸಾಯುತ್ತಿವೆ ಎಂದು ವರದಿ ವಿವರಿಸಿದೆ.

ಸುಮಾರು ಮೂರನೇ ಎರಡರಷ್ಟು ಸಾವುಗಳು ಘನ ಇಂಧನಗಳಾದ ಇದ್ದಿಲು, ಮರ ಮತ್ತು ಪ್ರಾಣಿಗಳ ಸೆಗಣಿಯನ್ನು ಅಡುಗೆಗೆ ಬಳಸುವುದ ರಿಂದ ಸಂಭವಿಸುತ್ತಿವೆ. ನವಜಾತ ಶಿಶುಗಳು ಅಧಿಕ ಪ್ರಮಾಣದಲ್ಲಿ ಸಾಯಲು ಕಡಿಮೆ ತೂಕ ಮತ್ತು ಅವಧಿಪೂರ್ವ ಪ್ರಸವ ಕಾರಣ ಎಂದು ವಿಶ್ಲೇಷಿಸಿದೆ.

ಇತ್ತೀಚೆಗೆ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (ಜಿಬಿಡಿ) ಅಧ್ಯಯನ ವರದಿಯನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಕೋವಿಡ್-19 ಸೋಂಕಿನಿಂದ 10 ಲಕ್ಷಕ್ಕೂ ಅಧಿಕ ಮಂದಿ ಬಲಿಯಾದ ಹಿನ್ನೆಲೆಯಲ್ಲಿ ಈ ವರದಿ ಸಿದ್ಧಪಡಿಸಲಾಗಿತ್ತು. ವಾಯುಮಾಲಿನ್ಯ ಹಾಗೂ ಕೋವಿಡ್-19 ನಡುವಿನ ಸಂಬಂಧ ತಿಳಿದು ಬಂದಿಲ್ಲವಾದರೂ, ಹೃದಯ ಮತ್ತು ಶ್ವಾಸಕೋಶ ಕಾಯಿಲೆಗಳು ಹೆಚ್ಚುತ್ತಿರುವುದಕ್ಕೆ ವಾಯು ಮಾಲಿನ್ಯ ಕಾರಣ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳಿವೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News