ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್

Update: 2020-10-22 11:20 GMT

ಬೆಂಗಳೂರು, ಅ. 22: ಇತ್ತೀಚೆಗಷ್ಟೇ ಅಕಾಲಿಕವಾಗಿ ನಿಧನರಾದ, ಚಿತ್ರನಟ ಚಿರಂಜೀವಿ ಸರ್ಜಾ(ಚಿರು) ಅವರ ಪತ್ನಿ ಹಾಗೂ ನಟಿ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮನೀಡಿದ್ದಾರೆ.

ಗುರುವಾರ ಬೆಳಗ್ಗೆ 11:07 ಗಂಟೆ ಸುಮಾರಿಗೆ ಇಲ್ಲಿನ ಬೆಂಗಳೂರಿನ ಕೆ.ಆರ್.ರಸ್ತೆಯ ಅಕ್ಷಯ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಿಶ್ಚಿತಾರ್ಥದ ದಿನವೇ ಪುತ್ರನ ಆಗಮನವಾಗಿರುವುದು ಸರ್ಜಾ ಕುಟುಂಬದಲ್ಲಿ ಹೊಸ ಸಂಭ್ರಮ ಮೂಡಿಸಿದೆ.

ಮೇಘನಾ ರಾಜ್‍ಗೆ ಗಂಡು ಮಗು ಹುಟ್ಟಿದ ಕೂಡಲೇ ಚಿರು ಸರ್ಜಾ ಅವರ ಅಜ್ಜಿ ಲಕ್ಷ್ಮಿದೇವಿಯವರು ಆಸ್ಪತ್ರೆಯಿಂದ ಹೊರಬಂದು ಸಿಹಿ ಖರೀದಿಸಿ ಆಸ್ಪತ್ರೆಯ ಸಿಬ್ಬಂದಿಗೆ ಹಂಚಿ ಸಂಭ್ರಮಪಟ್ಟಿದ್ದಾರೆ ಎಂದು ಗೊತ್ತಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ನಟಿ ಮೇಘನಾ ರಾಜ್ ಅವರಿಗೆ ಅದ್ದೂರಿ ಸೀಮಂತ ಕಾರ್ಯಕ್ರಮ ನಡೆಸಿದ್ದರು.

ಕೆಲ ತಿಂಗಳ ಹಿಂದೆ ಚಿರಂಜೀವಿ ಸರ್ಜಾ ಅಕಾಲಿಕ ನಿಧನರಾಗಿದ್ದರು. ಚಿರು ಮೃತಪಟ್ಟಾಗ ಮೇಘನಾ ರಾಜ್ ಐದು ತಿಂಗಳ ಗರ್ಭಿಣಿಯಾಗಿದ್ದರು. ನಟ ಹಾಗೂ ಚಿರು ಸಹೋದರ ಧ್ರುವ ಸರ್ಜಾ ಆಸ್ಪತ್ರೆಯ ವಾರ್ಡ್ ಬಾಗಿಲಲ್ಲಿ ಮಗು ಎತ್ತಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News