ಸರ್ಕಾರ ಆಶ್ವಾಸನೆ ಕೊಡುತ್ತದೆಯೇ ಹೊರತು ಸಾಕಾರಗೊಳಿಸುವುದಿಲ್ಲ: ಡಿ.ಕೆ ಶಿವಕುಮಾರ್

Update: 2020-10-22 12:22 GMT

ಬೆಂಗಳೂರು, ಅ.22: 'ಎದುರಾಳಿ ನಮ್ಮ ಸರಿ ಸಮನಾಗಿದ್ದರೆ ಯುದ್ಧ ಮಾಡಬಹುದು. ನಮ್ಮ ಸರಿಸಮನಾಗಿ ಇಲ್ಲ ಎಂದರೆ ಯುದ್ಧ ಮಾಡಲು ಆಗಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಜಾತ್ಯಾತೀತ ಜನತಾದಳದ ಕುಂದಗೋಳ ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್. ಅಕ್ಕಿ ಹಾಗೂ ಅವರ ಬೆಂಬಲಿಗರನ್ನು ಡಿ.ಕೆ ಶಿವಕುಮಾರ್ ಅವರು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಶಿವಕುಮಾರ್ 'ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತಗಳೊಂದಿಗೆ ಗೆಲ್ಲುವು ಸಾಧಿಸಲಿದೆ. ಆರ್ ಆರ್ ನಗರದಲ್ಲಿ ಮಾರಾಮಾರಿ ರಾಜಕಾರಣ ನಡೆಯುತ್ತಿದೆ. ಹೆಣಗಳು ಬೀಳುತ್ತವೆ ಹೀಗಾಗಿ ಪ್ಯಾರಾ ಮಿಲಿಟರಿ ರಕ್ಷಣೆ ನೀಡಬೇಕು ಎಂದು ಪತ್ರ ಬರೆಯುವುದಾಗಿ ಮಾಜಿ ಶಾಸಕರು ಹೇಳಿಕೆ ನೀಡಿದ್ದಾರೆ. ಅವರು ಮುಂಚೆಯೇ ಈ ಪತ್ರ ಬರೆಯಬೇಕಿತ್ತು. ಈಗ ತಡವಾಗಿದೆ. ಆ ಪತ್ರವನ್ನು ಮುಖ್ಯಮಂತ್ರಿಗಳಿಂದಲೋ ಅಥವಾ ಪಕ್ಷದ ಅಧ್ಯಕ್ಷರಿಂದಲೋ ಬರೆಸಿದ್ದಾರೆ ಉತ್ತಮವಾಗಿರುತ್ತಿತ್ತು ಎಂದರು.

ಮಾರಾಮಾರಿ ರಾಜಕಾರಣ ಮಾಡುವಂತಹ ಸಂಸ್ಕೃತಿ ಇರುವವರನ್ನು ನಾವು ಬೆಳೆಸಿದೆವಲ್ಲ ಏನು ಮಾಡುವುದು? ಈಗ ಪಶ್ಚಾತ್ತಾಪ ಪಡಬೇಕಾಗಿದೆ. ನಾನು ಯಾರಿಗೂ ಗುರುಗಳಲ್ಲ. ಎಲ್ಲರಿಗೂ ಶಿಷ್ಯರಾಗಿ ಇರುತ್ತೇನೆ. ನಿಮಗೂ ಶಿಷ್ಯನೇ. ನಾವು ಹತಾಶರಾಗಿದ್ದೇವೆ, ನಮ್ಮನ್ನು ಬೆಂಗಳೂರಿನ ಜನ ಪ್ಯಾಕ್ ಮಾಡಿ ಕಳಿಸುತ್ತಾರೆ ಎಂದು ಹೇಳಿದವರಿಗೆ ಒಳ್ಳೆಯದಾಗಲಿ. ನಾನು ಯಾರಿಗೂ ಏನನ್ನೂ ಹೇಳುವುದಿಲ್ಲ. ಕಾನೂನು ಪಾಲನೆ ಮಾಡಿ, ಜನರ ರಕ್ಷಣೆ ಮಾಡಿ, ಆ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಕ್ಷೇತ್ರವನ್ನಾಗಿ ಮಾಡಲು ಮಾತ್ರ ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಇದೊಂದು ಕೇವಲ ಆಶ್ವಾಸನೆ ಸರ್ಕಾರ

ಈ ಸರ್ಕಾರ ಕೇವಲ ಘೋಷಣೆ, ಆಶ್ವಾಸನೆಗಳನ್ನು ನೀಡುತ್ತಿದೆಯೇ ಹೊರತು. ಅವುಗಳನ್ನು ಈಡೇರಿಸುತ್ತಿಲ್ಲ. ಕಳೆದ ವರ್ಷ ಪ್ರವಾಹ ಬಂದಾಗ 35 ಸಾವಿರ ಕೋಟಿ ನಷ್ಟವಾಗಿದೆ ಎಂದಿದ್ದರು. ಕೇಂದ್ರ ಸರ್ಕಾರ ಕೇವಲ 1800 ಕೋಟಿ ಕೊಟ್ಟಿತ್ತು. ಮುಖ್ಯಮಂತ್ರಿಗಳು ಮನೆ ಕಳೆದು ಕೊಂಡವರಿಗೆ 5 ಲಕ್ಷ ಹಾಗೂ ಬಾಡಿಗೆ ಕಟ್ಟಲು 5 ಸಾವಿರ ಕೊಡುವುದಾಗಿ ಹೇಳಿದ್ದರು. ಇನ್ನು ಅದು ಜನರ ಕೈಗೆ ಸೇರಿಲ್ಲ. ಇನ್ನು ಈ ವರ್ಷದ ವೈಮಾನಿಕ ಸಮೀಕ್ಷೆ ಮಾಡಿದ್ದು, ಪರಿಹಾರ ಕೊಡೋದು ಯಾವಾಗ. ಕಂದಾಯ ಸಚಿವರು ನಮ್ಮ ಬಳಿ ದುಡ್ಡಿದೆ ಎಂದು ಹೇಳಿದ್ದಾರೆ. ಕೊರೋನ ಸಮಯದಲ್ಲಿ ನಾವು ಆಗ್ರಹ ಮಾಡಿದ ಮೇಲೆ ಒಂದಷ್ಟು ಜನಕ್ಕೆ ಪರಿಹಾರ ನೀಡುವುದಾಗಿ ಘೋಷಿಸಿದರು. ಇದುವರೆಗೂ ಆ ಪರಿಹಾರ ರೈತರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ ತಲುಪಿಲ್ಲ. ಈ ಸರ್ಕಾರ ಆಶ್ವಾಸನೆ ಘೋಷಣೆ ಮಾಡುತ್ತದೆಯೇ ಹೊರತು ಅದನ್ನು ಸಾಕಾರಗೊಳಿಸುವುದಿಲ್ಲ ಎಂದು ಡಿಕೆಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News