ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಬಂಡವಾಳ ಆಕರ್ಷಿಸಿದೆ: ಸಿಎಂ ಯಡಿಯೂರಪ್ಪ

Update: 2020-10-22 14:17 GMT

ಬೆಂಗಳೂರು, ಅ. 22: ಕೊರೋನ ಸೋಂಕಿನ ಲಾಕ್‍ಡೌನ್ ನಡುವೆಯೂ ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಸರಕಾರ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಿದ್ದು, ರಾಜ್ಯದಲ್ಲಿ ಹೂಡಿಕೆಗೆ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಯಮ ಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಪಬ್ಲಿಕ್ ಅಫೇರ್ ಆಫ್ ಇಂಡಿಯಾ (ಪಾಫಿ) ಸಹಯೋಗದಲ್ಲಿ ರಾಜ್ಯ ಸರಕಾರ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಉದ್ಯಮ ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳ ಆಕರ್ಷಣೆಗೆ ಸಹಕರಿಸಬೇಕು ಎಂದು ದೇಶದ ವಿವಿಧ ಕಂಪೆನಿಗಳ ಉದ್ದಿಮೆ ನಾಯಕರಿಗೆ ಮನವಿ ಮಾಡಿದರು. ಐಟಿ, ಐಟಿಇಎಸ್ ಸೇವೆಗಳು, ಮೆಷಿನ್ ಟೂಲಿಂಗ್, ಉತ್ಪಾದನೆ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ ಹಾಗೂ ಇಂಜಿನಿಯರಿಂಗ್ ವಿನ್ಯಾಸ ಸೇರಿದಂತೆ ಕರ್ನಾಟಕದಲ್ಲಿ ಹೂಡಿಕೆಗೆ ವಿಫಲು ಅವಕಾಶಗಳಿವೆ ಎಂದರು.

`ಫಾರ್ಚೂನ್ 500 ಕಂಪೆನಿಗಳ ಪೈಕಿ 400 ಕಂಪೆನಿಗಳು ಜತೆಗೆ ಸುಮಾರು 400 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ರಾಜ್ಯ ನೆಲೆಯಾಗಿದೆ. 2020ರ ಜೂನ್‍ನಲ್ಲಿ ಕೊನೆಗೊಂಡ ಅವಧಿಯಲ್ಲಿ ರಾಜ್ಯ ವಿದೇಶಿ ನೇರ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಉದ್ದಿಮೆದಾರರ ನೆಚ್ಚಿನ ತಾಣ ಎನಿಸಿಕೊಂಡಿದೆ' ಎಂದ ಅವರು, `ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಲಯಗಳಲ್ಲಿ ಪ್ರಬಲ ಸಾಮರ್ಥ್ಯ ಹೊಂದಿರುವ ರಾಜ್ಯ, ಜೈವಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸೆಮಿಕಂಡಕ್ಟರ್, ಕೃಷಿ, ವಾಹನ ಮುಂತಾದ ನಾನಾ ಕ್ಷೇತ್ರಗಳನ್ನು ಉತ್ತೇಜಿಸಲು `ಉದ್ಯಮ ನಿರ್ದಿಷ್ಟ ನೀತಿ' ಜಾರಿ ತರುವ ಮೂಲಕ ಉದ್ಯಮ ಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸಿದೆ' ಎಂದರು.

'ಕೈಗಾರಿಕೆಯಲ್ಲಿ ಮುಂದುವರಿದ ರಾಜ್ಯಗಳ ಪೈಕಿ ಒಂದಾಗಿರುವ ಕರ್ನಾಟಕ, ಉದ್ಯಮಿಗಳ ಆಕರ್ಷಕ ಹೂಡಿಕೆ ತಾಣವಾಗಿದೆ. ಸುಮಾರು 250 ಶತಕೋಟಿ ಡಾಲರ್ ಆರ್ಥಿಕತೆಯ ರಾಜ್ಯ ಪ್ರಬಲ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಹಲವು ವಲಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಯಂತ್ರೋಪಕರಣಗಳು, ಬೃಹತ್ ಯಂತ್ರೋಪಕರಣಗಳು, ವಾಹನಗಳು, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್, ಜೈವಿಕ ತಂತ್ರಜ್ಞಾನದಂತಹ ಕೈಗಾರಿಕೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ' ಎಂದರು.

`ನೀತಿ ಆಯೋಗ ಬಿಡುಗಡೆ ಮಾಡುವ ಹೊಸ ಆವಿಷ್ಕಾರಗಳ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ರಾಜ್ಯ ಅಗ್ರಸ್ಥಾನ ಪಡೆದಿದೆ. ನುರಿತ ಮಾನವ ಸಂಪನ್ಮೂಲ ಲಭ್ಯತೆ, ಹೆಸರಾಂತ ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗಿದೆ' ಎಂದು ಸಿಎಂ ಹೇಳಿದರು.

ವೀಡಿಯೋ ಸಂವಾದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ರೇವಣ್ಣಗೌಡ, ಜ್ಯುಬ್ಲಿಯಂಟ್ ಭಾರತೀಯಾ ಗ್ರೂಪ್‍ನ ಅಜಯ್ ಖನ್ನಾ, ಪಾಫಿ ಅಧ್ಯಕ್ಷ ಇಶ್ತೇಯಾಕ್ ಅಮ್ಜಾದ್, ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್, ಯುಎಸ್‍ಐಬಿಸಿ ಅಧ್ಯಕ್ಷೆ ನಿಶಾ ಬಿಸ್ವಾಲ್, ಕೋಟಕ್ ಮಹೀಂದ್ರಾದ ಉದಯ್ ಕೋಟಕ್, ಪಾಫಿ ಉಪಾಧ್ಯಕ್ಷ ಸುಭೋ ರಾಯ್, ಆಪ್ಕೋ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರ್ಮ ಉಪಸ್ಥಿತರಿದ್ದರು.

ಕೈಗಾರಿಕಾಭಿವೃದ್ಧಿ ಸರಕಾರದ ಆದ್ಯತೆ

ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ, ಹೊಸ ಕೈಗಾರಿಕಾ ನೀತಿ 2020-2025ನ್ನು ಪರಿಚಯಿಸಿದೆ. ರಾಜ್ಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಜತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೊಸನೀತಿ ನೆರವಾಗಲಿದೆ. ಉದ್ದಿಮೆಗೆ ಪೂರಕ ಭತ್ಯೆ ಸೇರಿದಂತೆ ಭೂ ಲಭ್ಯತೆ, ಕಾರ್ಮಿಕ ಕಾನೂನಿನ ಸುಧಾರಣೆ ಹಲವು ನಿಯಂತ್ರಕ ಸುಧಾರಣೆಗಳನ್ನು ಈ ನೀತಿ ಒಳಗೊಂಡಿದೆ. ಈ ಎಲ್ಲ ಪೂರಕ ಕ್ರಮಗಳ ಮೂಲಕ ಆರ್ಥಿಕ ಮತ್ತು ಕೈಗಾರಿಕಾಭಿವೃದ್ಧಿ ಉತ್ತೇಜಿಸುವುದು ಸರಕಾರದ ಆದ್ಯತೆ.

-ಜಗದೀಶ ಶೆಟ್ಟರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News