ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ: ಸಂಪುಟ ಉಪ ಸಮಿತಿ ನಿರ್ಣಯ

Update: 2020-10-22 14:44 GMT

ಬೆಂಗಳೂರು, ಅ.22: 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಪ್ರತಿ ಎಕರೆಗೆ 16 ಕ್ವಿಂಟಾಲ್‍ನಂತೆ ಗರಿಷ್ಠ 40 ಕ್ವಿಂಟಾಲ್ ಭತ್ತ ಖರೀದಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಕುರಿತ ಸಂಪುಟದ ಉಪ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಹೆಚ್ಚುವರಿಯಾಗಿ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲು ಅನುಮತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು. ಮುಂದಿನ ತಿಂಗಳಿನಿಂದ ಈ ಬಗ್ಗೆ ರೈತರ ನೊಂದಣಿ ಕಾರ್ಯ ಪ್ರಾರಂಭಿಸಿ ತದನಂತರ ಖರೀದಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕನಿಷ್ಢ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆಹಾರ ಧಾನ್ಯಗಳ ಖರೀದಿಯಲ್ಲಿ ಅಗತ್ಯವಿರುವ ಅನುದಾನವನ್ನು ರಾಜ್ಯದ ಆವರ್ತ ನಿಧಿಯಿಂದ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದು ಹಾಗೂ ಬೇಡಿಕೆಗೆ ಅನುಗುಣವಾಗಿ ಸಂಗ್ರಹಣಾ ಏಜೆನ್ಸಿಗಳಿಗೆ ಅನುದಾನ ಬಿಡುಗಡೆ ಮಾಡುವುದು. ಕೇಂದ್ರ ಸರಕಾರವು ನಿಗದಿಪಡಿಸಿರುವಂತೆ ವಿವಿಧ ವೆಚ್ಚಗಳನ್ನು ಅಕ್ಕಿ ಗಿರಣಿಗಳ ಮಾಲಕರಿಗೆ ನೀಡುವುದು ಮತ್ತು ಕೇಂದ್ರ ಸರಕಾರದ ಮಾನದಂಡಗಳನ್ವಯ ಕ್ರಮ ವಹಿಸಲು ನಿರ್ಣಯಿಸಲಾಗಿದೆ.

ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕೋರಿಕೆಯಂತೆ ರಾಜ್ಯ ಉಗ್ರಾಣ ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸುವ ಪ್ರಕ್ರಿಯೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಕೈಬಿಟ್ಟು, ಈ ಏಜೆನ್ಸಿಗೆ ನಿಯೋಜಿಸಿದ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗೆ ವಹಿಸಲು ನಿರ್ಧರಿಸಲಾಗಿದೆ.

ಖರೀದಿ ಕಾರ್ಯಕ್ಕೆ ಸಂಗ್ರಹಣಾ ಏಜೆನ್ಸಿಗಳನ್ನಾಗಿ ರಾಜ್ಯ ಆಹಾರ ಮತ್ತು  ನಾಗರಿಕ ಸರಬರಾಜು ನಿಗಮ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳಗಳಿಗೆ ಜಿಲ್ಲೆಗಳನ್ನು ನಿಯೋಸಲು ತೀರ್ಮಾನಿಸಲಾಗಿದೆ.

2019-20ನೇ ಸಾಲಿನಲ್ಲಿ ಸಂಗ್ರಹಣಾ ಏಜೆನ್ಸಿಗಳಾದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ 27 ಕೋಟಿ ರೂ, ರಾಜ್ಯ ಉಗ್ರಾಣ ನಿಗಮಕ್ಕೆ 21 ಕೋಟಿ ರೂ. ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ 8 ಕೋಟಿ ರೂ.ಒಟ್ಟು 56 ಕೋಟಿ ರೂ.ಗಳನ್ನು ಬಾಕಿ ಇರುವ ಹಣವನ್ನು ಆವರ್ತ ನಿಧಿಯಿಂದ ಭರಿಸಲು ಕ್ರಮವಹಿಸಲು ನಿರ್ಧರಿಸಲಾಗಿದೆ.

ಶೇಂಗಾ ಖರೀದಿ ಪ್ರಕ್ರಿಯೆಗೆ ಕೇಂದ್ರ ಸರಕಾರವು ಈಗಾಗಲೇ ಅನುಮತಿ ನೀಡಿರುವುದರಿಂದ ಶೀಘ್ರವೇ ಶೇಂಗಾ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಗೆ ಅನುಮತಿ ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

79,175 ಮೆಟ್ರಿಕ್ ಟನ್ ಸೋಯಾಬಿನ್ ಖರೀದಿಗೆ ಕೇಂದ್ರದಿಂದ ಅನುಮತಿ ದೊರೆತಿದ್ದು, ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಹೆಸರು, ಉದ್ದು ಮತ್ತು ಉಂಡೆ ಕೊಬ್ಬರಿ ಖರೀದಿ ಈಗಾಗಲೇ ಚಾಲನೆಯಲ್ಲಿದೆ.

ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News