ಲಕ್ಷ್ಮಿ ಮಿತ್ತಲ್ ಸಹೋದರ ದಿವಾಳಿ: ಬ್ರಿಟನ್ ಕೋರ್ಟ್ ಘೋಷಣೆ

Update: 2020-10-23 04:01 GMT

ಲಂಡನ್, ಅ.23: ವಿಶ್ವದ ಅತ್ಯಂತ ಶ್ರೀಮಂತ ಉಕ್ಕು ಉದ್ಯಮಿ, ಅರ್ಸೆಲೋರ್ ಮಿತ್ತಲ್ ಅಧ್ಯಕ್ಷ ಮತ್ತು ಸಿಇಓ ಲಕ್ಷ್ಮಿ ಮಿತ್ತಲ್ ಅವರ ಸಹೋದರ ಪ್ರಮೋದ್ ಮಿತ್ತಲ್ ಅವರನ್ನು ಬ್ರಿಟನ್ ಹೈಕೋರ್ಟ್ ದಿವಾಳಿ ಎಂದು ಘೋಷಿಸಿದೆ.

ಇನ್‌ಸಾಲ್ವೆನ್ಸಿ ಅಂಡ್ ಕಂಪನೀಸ್ ಲಿಸ್ಟ್ ಕಳೆದ 23ರಂದು ಪ್ರಮೋದ್ (64) ಅವರನ್ನು ದಿವಾಳಿ ಎಂದು ಘೋಷಿಸಿತ್ತು. ಮೂರ್‌ಗೇಟ್ ಇಂಡಸ್ಟ್ರೀಸ್ ಅವರ ವಿರುದ್ಧ ದಿವಾಳಿತನ ದಾವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿತ್ತು. ಲಕ್ಷ್ಮಿ ಮಿತ್ತಲ್ ಅವರು ಭಾರತದ 10ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಅವರ ಆಸ್ತಿ ಮೌಲ್ಯ ಸುಮಾರು 75,889 ಕೋಟಿ ರೂಪಾಯಿ. ವಿಶ್ವದ ಅತಿಶ್ರೀಮಂತರ ಪೈಕಿ ಅವರು 91ನೇ ಸ್ಥಾನದಲ್ಲಿದ್ದಾರೆ.

ಹೈಡ್‌ಪಾರ್ಕ್ ಸಮೀಪ ವಾಸವಿರುವ ಪ್ರಮೋದ್, ಹೈಕೋರ್ಟ್‌ನ ವಾಣಿನ್ಯ ನ್ಯಾಯಾಲಯ ನೀಡಿದ ತೀರ್ಪಿನಂತೆ 166 ದಶಲಕ್ಷ ಡಾಲರ್ (1,223 ಕೋಟಿ ರೂ.) ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ದಿವಾಳಿ ಎಂದು ಘೋಷಿಸಲಾಗಿದೆ.

ಮಿತ್ತಲ್ 1,340 ಕೋಟಿ ರೂ. ಸಾಲಬಾಕಿ ಪಾವತಿಗೆ ವಿಫಲವಾಗಿದ್ದಾರೆ ಎಂದು ಆಪಾದಿಸಿ ಅವರ ವಿರುದ್ಧ ಮೂರ್‌ಗೇಟ್ ದಿವಾಳಿತನ ಅರ್ಜಿ ಸಲ್ಲಿಸಿತ್ತು. ಕಳೆದ ಜೂನ್ 19ರಂದು ದಿವಾಳಿತನ ಮತ್ತು ಕಂಪೆನಿಗಳ ನ್ಯಾಯಾಲಯದ ನ್ಯಾಯಾಧೀಶ ಕ್ಯಾಥರೀನ್ ಬರ್ಟನ್ ದಿವಾಳಿತನ ಆದೇಶ ಹೊರಡಿಸಿದ್ದರು.

ಪ್ರಮೋದ್ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಿ ಸಾಲ ಪಾವತಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದ್ದರು. 2008ರಿಂದೀಚೆಗೆ ನಡೆಯುತ್ತಿರುವ ನೈಜೀರಿಯಾ ವ್ಯಾಜ್ಯ ಪ್ರಕರಣದಲ್ಲಿ ಹಲವು ಕೋಟಿ ರೂಪಾಯಿ ಬರುವ ನಿರೀಕ್ಷೆ ಇದ್ದು, ಈ ಮೊತ್ತದಲ್ಲಿ ಬಾಕಿ ಪಾವತಿಸುವುದಾಗಿ ಮಿತ್ತಲ್ ವಾದ ಮಂಡಿಸಿದ್ದರು. ಜಿಎನ್ ಎಂಬ ನೈಜೀರಿಯನ್ ಕಂಪೆನಿಯಲ್ಲಿ ಮಿತ್ತಲ್ ಕುಟುಂಬ ಟ್ರಸ್ಟ್ ಶೇಕಡ 75ರಷ್ಟು ಪಾಲು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News