ರಿಪಬ್ಲಿಕ್ ಟಿವಿ ಸಂಪಾದಕೀಯ ತಂಡದ ವಿರುದ್ಧ ಪ್ರಕರಣ ದಾಖಲಿಸಿದ ಮುಂಬೈ ಪೊಲೀಸ್

Update: 2020-10-24 05:51 GMT

ಮುಂಬೈ: ಪೊಲೀಸ್ ಇಲಾಖೆಯ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಶುಕ್ರವಾರ ರಿಪಬ್ಲಿಕ್ ಟಿವಿ ಚಾನೆಲ್‌ನ ಕಾರ್ಯನಿರ್ವಾಹಕ ಸಂಪಾದಕ, ನಿರೂಪಕ, ಇಬ್ಬರು ವರದಿಗಾರರು ಹಾಗೂ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಇತರ ಸಂಪಾದಕೀಯ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಪೊಲೀಸ್ ಆಯುಕ್ತ ಪರಮ್‌ಬೀರ್ ಸಿಂಗ್ ವಿರುದ್ಧ ಪೊಲೀಸ್ ಸಿಬ್ಬಂದಿಯಲ್ಲಿ ಅಸಮಾಧಾನ ಉಂಟು ಮಾಡುವ ಸುದ್ದಿಯನ್ನು ರಿಪಬ್ಲಿಕ್ ಚಾನೆಲ್ ಪ್ರಸಾರ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಪೊಲೀಸ್ ಸಿಬ್ಬಂದಿ ಪರಮ್‌ಬೀರ್ ಸಿಂಗ್ ವಿರುದ್ಧ ಬಹಿರಂಗ ಪ್ರತಿರೋಧ ಒಡ್ಡುತ್ತಿದ್ದಾರೆ ಹಾಗೂ ಆಯುಕ್ತರ ಆದೇಶಗಳು ಸಿಬ್ಬಂದಿಗೆ ಸ್ವೀಕಾರಾರ್ಹವಾಗಿಲ್ಲ ಎಂದು ಚಾನೆಲ್ ವರದಿ ಮಾಡಿತ್ತು.

ರಿಪಬ್ಲಿಕ್ ಚಾನೆಲ್ ವಿರುದ್ಧ ನಾಲ್ಕನೇ ಪ್ರಕರಣ ಇದಾಗಿದೆ. ಅದರ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಕೋಮು ಉದ್ವೇಗವನ್ನು ಪ್ರಚೋದಿಸಿದ ಆರೋಪದ ಮೇಲೆ ಪೈಧೋನಿ ಹಾಗೂ ಎನ್‌ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಗಳಲ್ಲಿ ನೋಂದಾಯಿಸಲಾದ ಎರಡು ಎಫ್‌ಐಆರ್‌ಗಳನ್ನು ಎದುರಿಸುತ್ತಿದ್ದಾರೆೆ.

ಟಿಆರ್‌ಪಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಅಪರಾಧ ಶಾಖೆ ತನಿಖೆ ನಡೆಸುತ್ತಿದ್ದು, ಗೋಸ್ವಾಮಿ ವಿರುದ್ಧ ಪೊಲೀಸರು ಪ್ರತ್ಯೇಕ ಕ್ರಮ ತೆಗೆದುಕೊಳ್ಳಲು ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News