ರಾಜಧಾನಿಯಲ್ಲಿ ಹಬ್ಬದ ನಡುವೆ ಮಳೆಯ ಅಬ್ಬರ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

Update: 2020-10-24 13:30 GMT

ಬೆಂಗಳೂರು, ಅ.24: ರಾಜಧಾನಿಯ ಜನರು ನಾಡಹಬ್ಬದ ಸಂಭ್ರಮದಲ್ಲಿರುವ ಹೊತ್ತಲ್ಲಿ ವರುಣ ಅಬ್ಬರಿಸಿದ್ದು, ಶುಕ್ರವಾರ ತಡರಾತ್ರಿವರೆಗೂ ಸುರಿದ ಧಾರಾಕಾರ ಮಳೆಗೆ ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾರೀ ಮಳೆಯಿಂದಾಗಿ ನಗರದ ಹೊಸಕೆರೆಹಳ್ಳಿ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ಹೊಸಕೆರೆಹಳ್ಳಿಯಲ್ಲಿ ವೃಷಭಾವತಿ ಕಾಲುವೆಗೆ ಸಂಪರ್ಕಿಸುವ ಬೃಹತ್ ರಾಜಕಾಲುವೆಯ ಕಾಮಗಾರಿಗಾಗಿ ನೀರಿನ ದಿಕ್ಕನ್ನು ಬದಲಿಸಲಾಗಿದ್ದು, ಅವಘಡಕ್ಕೆ ಇದೇ ಕಾರಣವೆಂದು ಹೇಳಲಾಗುತ್ತಿದೆ. 

ನೀರಿನ ದಿಕ್ಕನ್ನು ಬದಲಿಸಿದ ಪರಿಣಾಮ ಭಾರೀ ಪ್ರಮಾಣದ ನೀರು ಒಮ್ಮೆಲೆ ನುಗ್ಗಿ ಬಂದಿದೆ. ಪರಿಣಾಮ ರಾಜಕಾಲುವೆ ಸಮೀಪದ ಮನೆಗಳು, ಕಟ್ಟಡಗಳು ಜಲಾವೃತಗೊಂಡವು. ಈ ಭಾಗದಲ್ಲಿ ಅಂದಾಜು 350ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.
ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಹಿಂಭಾಗದ ರಾಜಕಾಲುವೆ ಪಕ್ಕದ ರಸ್ತೆಯಲ್ಲೇ ನದಿಯಂತೆ ರಭಸವಾಗಿ ನೀರು ಹರಿದ ಪರಿಣಾಮ ಕಾರೊಂದು ಕೊಚ್ಚಿಕೊಂಡು ಹೋಗಿತ್ತು.

300ಕ್ಕೂ ಹೆಚ್ಚು ಮನೆಗಳಿಗೆ ನೀರು: ಇಲ್ಲಿನ ಬಡಾವಣೆಗಳ ಮನೆ, ಅಪಾರ್ಟ್ ಮೆಂಟ್‍ಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಹೊಸಕೆರೆಹಳ್ಳಿಯಲ್ಲಿ ಜನರು ಕಟ್ಟಡಗಳ ಮೇಲೆ ಆಶ್ರಯ ಪಡೆದಿದ್ದರು. ನೆಲಮಹಡಿಯಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹಾಗೂ ಎಸ್‍ಡಿಆರ್‍ಎಫ್ ಸಿಬ್ಬಂದಿ ಬೋಟ್ ಮೂಲಕ ರಕ್ಷಣೆ ಮಾಡಿದರು, ಹೊಸಕೆರೆಹಳ್ಳಿ ದತ್ತಾತ್ರೇಯ ದೇವಾಲಯವೂ ಮುಳುಗಿದೆ. ಅ.21 ರಂದು ಸುರಿದ ಮಳೆಯಿಂದಾಗಿ ಹೊಸಕೆರೆಹಳ್ಳಿ ಗುರುದತ್ತ ಲೇಔಟ್‍ನಲ್ಲಿ ರಾಜಕಾಲುವೆ ಕುಸಿದು ಅವಾಂತರ ಸೃಷ್ಟಿಯಾಗಿತ್ತು.

ಅಲ್ಲದೇ ಹೊಸಕರೆಹಳ್ಳಿಯ ದತ್ತಾತ್ರೇಯ ಸ್ವಾಮಿ ದೇವಾಲಯ ಸಂಪೂರ್ಣ ಮುಳುಗಡೆಯಾದ ಕಾರಣ ದವಸ ಧಾನ್ಯ ಎಲ್ಲವೂ ನೀರುಪಾಲಾಗಿದೆ. ಜೊತೆಗೆ ಸಿಬ್ಬಂದಿ ವಿಗ್ರಹಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಿದ ದತ್ತಪೀಠದ ಗುರುದತ್ತ ಗುರೂಜಿ, ಮಠಕ್ಕೆ ನೀರು ನುಗ್ಗಿ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು ನೀರುಪಾಲಾಗಿವೆ. ಎರಡು ವರ್ಷದ ಹಿಂದೆ ಕೂಡ ಇದೇ ರೀತಿ ಆಗಿತ್ತು. ರಾಜಕಾಲುವೆ ಒಡೆದು ನೀರು ಉಕ್ಕಿ ದೇವಸ್ಥಾನಕ್ಕೆ ನುಗ್ಗಿತ್ತು. ದೇವಾಲಯದೊಳಗೂ ಹಾನಿಯಾಗಿದೆ ಎಂದಿದ್ದಾರೆ.

ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಕೋರಮಂಗಲ 4ನೇ ಬ್ಲಾಕ್, ಸಿಟಿ ಬೆಡ್ ಬಾಸ್ಕರ್ ರಾವ್ ಪಾರ್ಕ್ ಹಾಗೂ ಶ್ರೀಕಂಠೇಶ್ವರ ಪಾರ್ಕ್ ಸುತ್ತಮುತ್ತಲ ರಸ್ತೆಗಳು ಹಾಗೂ ಮನೆಗಳು ಜಲಾವೃತವಾಗಿ ಸವಾರರು ಹಾಗೂ ನಿವಾಸಿಗಳು ಪರದಾಡಿದರು.

ಬನಶಂಕರಿ 2ನೇ ಹಂತ, ಎಲ್‍ಐಸಿ ಕಾಲನಿ 1ನೇ ಕ್ರಾಸ್, ಐಐಟಿ ಬಡಾವಣೆ, ಕೋರಮಂಗಲ 4 ನೇ ಬ್ಲಾಕ್, ಜೆಪಿ ನಗರ 6 ನೇ ಹಂತ, ಅರೆಕೆಂಪನಹಳ್ಳಿ ವಾರ್ಡ್, ಹೊಸಕೆರಹಳ್ಳಿ, ದತ್ತಾತ್ರೇಯ ಲೇಔಟ್, ಕತ್ರಿಗುಪ್ಪೆ ವಿಠಲನಗರ, ವಸಂತಪುರ, ಆರ್‍ಆರ್ ನಗರ, ಜೆಸಿ ನಗರ, ಕೆ.ಆರ್ ಮಾರುಕಟ್ಟೆ, ಜೆ.ಸಿ.ರಸ್ತೆ, ಕಾಳಿದಾಸ ವೃತ್ತ, ಬೊಮ್ಮನಹಳ್ಳಿಯ ಸಾಕಷ್ಟು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ದಿನ ಬಳಕೆಯ ವಸ್ತುಗಳ ಜೊತೆ ಹಬ್ಬಕ್ಕೆ ತಂದಿಟ್ಟಿದ್ದ ವಸ್ತುಗಳು ನಾಶವಾಗಿವೆ. ಬೈಕ್‍ಗಳು, ಎಲೆಕ್ಟ್ರಿಕಲ್ ವಸ್ತುಗಳಿಗೆ ಹಾನಿಯಾಗಿದೆ. ಮನೆ ಸ್ವಚ್ಛತೆ ಮಾಡಲು ಸ್ವಚ್ಛ ನೀರಿಲ್ಲ. ಜನಸಾಮಾನ್ಯರು ದಿನ ಬಳಕೆಗೂ ನೀರಿಲ್ಲದೆ ಪರದಾಟ ಅನುಭವಿಸುವಂತಾಗಿದೆ.

ಶಾಂತಿನಗರ ಬಸ್ ಡಿಪೋ ರಸ್ತೆ ಜಲಾವೃತ: ಧಾರಾಕಾರ ಮಳೆ ಹಿನ್ನೆಲೆ ಶಾಂತಿನಗರ ಬಿಎಂಟಿಸಿ ಬಸ್ ಡಿಪೋ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕಳೆದ 6 ವರ್ಷಗಳಿಂದ ಇದೇ ಪರಿಸ್ಥಿತಿಯಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಸುಮಾರು ನಾಲ್ಕರಿಂದ ಐದು ಅಡಿಯಷ್ಟು ನೀರು ನಿಲ್ಲುತ್ತಿದೆ. ಜಲಾವೃತವಾಗಿರೋ ರಸ್ತೆಗಳಲ್ಲೇ ಬಸ್‍ಗಳು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ: ಆರ್.ಆರ್ ನಗರ-109 ಮಿ.ಮೀ.ಹೆಮ್ಮಿಗೆಪುರ-107 ಮಿ.ಮೀ.ಕೆಂಗೇರಿ-109 ಮಿ.ಮೀ.ಉಲ್ಲಾಳ-105 ಮಿ.ಮೀ.ವಿದ್ಯಾಪೀಠ-97 ಮಿ.ಮೀ.ಹೊಸಕೆರೆಹಳ್ಳಿ-96.5 ಮಿ.ಮೀ.ಉತ್ತರಹಳ್ಳಿ-90 ಮಿ.ಮೀ.ಕೋಣನಕುಂಟೆ-85 ಮಿ.ಮೀ.ಬಸವನಗುಡಿ, ಗವಿಗಂಗಾಧರೇಶ್ವರ ದೇವಸ್ಥಾನ-81.5 ಮಿ.ಮೀ.ಶಾಖಾಂಬರಿ ನಗರ-81 ಮಿ.ಮೀ.ಕುಮಾರಸ್ವಾಮಿ ಲೇಔಟ್-81 ಮಿ.ಮೀ.ಜಯನಗರ-72 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News