ಮಹಾರಾಷ್ಟ್ರದ ಮಾಜಿ ಸಿಎಂ ಫಡ್ನವಿಸ್‌ಗೆ ಕೊರೋನ ಪಾಸಿಟಿವ್

Update: 2020-10-24 09:37 GMT

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಉಸ್ತುವಾರಿವಹಿಸಿಕೊಂಡಿರುವ ದೇವೇಂದ್ರ ಫಡ್ನವಿಸ್‌ಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಸ್ವತಃ ಫಡ್ನವಿಸ್ ಅವರು ಟ್ವೀಟ್ ಮುಖಾಂತರ ಈ ವಿಚಾರವನ್ನು ಬಹಿರಂಗಪಡಿಸಿದ್ದು, ತನ್ನೊಂದಿಗೆ ಸಂಪರ್ಕಕ್ಕೆ ಬಂದವರು ಸ್ವತಃ ಪರೀಕ್ಷೆಗೆ ಒಳಗಾಗುವಂತೆ ಕೋರಿಕೊಂಡಿದ್ದಾರೆ.

 "ವೈದ್ಯರ ಸಲಹೆಯಂತೆ ನಾನು ಎಲ್ಲ ಔಷಧಿಗಳನ್ನು ಹಾಗೂ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ಲಾಕ್‌ಡೌನ್ ಜಾರಿಯಾದ ಬಳಿಕ ಪ್ರತಿದಿನವೂ ನಾನು ಕೆಲಸ ಮಾಡುತ್ತಿದ್ದೆ. ಇದೀಗ ನಾನು ಸ್ವಲ್ಪ ಸಮಯ ವಿರಾಮ ಪಡೆಯಬೇಕೆಂದು ದೇವರು ಬಯಸಿದ್ದಾನೆಂದು ಕಾಣುತ್ತದೆ'' ಎಂದು ಫಡ್ನವಿಸ್ ಟ್ವೀಟಿಸಿದ್ದಾರೆ.

ಫಡ್ನವಿಸ್‌ರನ್ನು ಕಳೆದ ತಿಂಗಳು ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಕೊರೋನ ವೈರಸ್ ಹಾವಳಿ ಆರಂಭವಾದ ಬಳಿಕ ನಡೆಯುತ್ತಿರುವ ಅತ್ಯಂತ ದೊಡ್ಡ ಚುನಾವಣೆ ಇದಾಗಿದೆ. ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಗೆ ಗುರುವಾರ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿತ್ತು.

ಭಾರತದಲ್ಲಿ ಶನಿವಾರ ಹೊಸತಾಗಿ 53,370 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು 78,14,680 ಕೇಸ್‌ಗಳಿವೆ. 650 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 1,17,956ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶದಲ್ಲಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News