ಅಂತರ್ಜಲ ದುರ್ಬಳಕೆ ಇನ್ನು ಶಿಕ್ಷಾರ್ಹ ಅಪರಾಧ

Update: 2020-10-24 11:08 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕುಡಿಯಲು ಬಳಸುವ ಅಂತರ್ಜಲದ ದುರ್ಬಳಕೆ  ಇನ್ನು ಭಾರತದಲ್ಲಿ ಶಿಕ್ಷಾರ್ಹ ಅಪರಾಧವಾಗಲಿದೆ. ಕೇಂದ್ರ ಅಂತರ್ಜಲ ಪ್ರಾಧಿಕಾರದ ಹೊಸ ಆದೇಶನದ್ವಯ ಅಂತರ್ಜಲದ ದುರ್ಬಳಕೆ ಮಾಡುವವರಿಗೆ ಐದು ವರ್ಷದ ತನಕ ಜೈಲು ಶಿಕ್ಷೆ ಹಾಗೂ ರೂ. 1 ಲಕ್ಷ ತನಕ ದಂಡ  ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ವಾಣಿಜ್ಯ ಹಾಗೂ ಗೃಹ ಬಳಕೆಯ ನೀರನ್ನು ಪೋಲುಗೊಳಿಸುವುದು ಹಾಗೂ ದುರ್ಬಳಕೆಗೊಳಿಸುವುದರ ವ್ಯಾಖ್ಯಾನವನ್ನು ಸ್ಥಳೀಯಾಡಳಿತ ಸಂಸ್ಥೆಗಳು  ಮಾಡಿದ ಬಳಿಕ ಅದರಂತೆಯೇ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು.

ಪರಿಸರ (ಸಂರಕ್ಷಣಾ) ಕಾಯಿದೆ 1986 ಅನ್ವಯ ಅಕ್ಟೋಬರ್ 8ರಂದು ಹೊರಡಿಸಿದ ಈ ಆದೇಶವನ್ನು ರಾಷ್ಟ್ರೀಯ ಹಸಿರು ಪೀಠದ ಸೂಚನೆಯಂತೆ ಹೊರಡಿಸಲಾಗಿದೆ.

ಕೊಳವೆ ಬಾವಿಯಿಂದ ಸರಬರಾಜಾಗುವ ನೀರನ್ನು ವಾಹನಗಳನ್ನು ತೊಳೆಯಲು, ಈಜುಕೊಳಗಳಿಗೆ ಬಳಸುವುದನ್ನು ತಡೆಯಬೇಕೆಂದು ಹಾಗೂ ನೀರು ಸರಬರಾಜು ವ್ಯವಸ್ಥೆಯಲ್ಲಿನ ಸೋರಿಕೆಯನ್ನು ತಡೆಗಟ್ಟಬೇಕೆಂದು ಕೋರಿ ರಾಜೇಂದ್ರ ತ್ಯಾಗಿ ಹಾಗೂ ಫ್ರೆಂಡ್ಸ್ ಎಂಬ ಸಂಘಟನೆ ಮೂಲಕ ಹಸಿರು ಪೀಠಕ್ಕೆ ಅಪೀಲು ಸಲ್ಲಿಸಲಾಗಿತ್ತು. ಈ ಅಪೀಲಿನ ವಿಚಾರಣೆ ನಡೆಸಿ ನೀರಿನ ದುರ್ಬಳಕೆಯನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಬೇಕೆಂದು ಪೀಠವು  ಅಂತರ್ಜಲ ಪ್ರಾಧಿಕಾರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News