ಬೆಂಗಳೂರಿನಲ್ಲಿ ವರುಣನ ಆರ್ಭಟ: ಹಾನಿಗೊಳಗಾದ ಮನೆಗಳಿಗೆ 25 ಸಾವಿರ ರೂ. ಪರಿಹಾರ ಘೋಷಣೆ

Update: 2020-10-24 11:13 GMT

ಬೆಂಗಳೂರು, ಅ.24: ಪಾಲಿಕೆ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ ಸಂಪೂರ್ಣ ಜಲಾವೃತವಾಗಿದ್ದು, ಅನಾಹುತ ಪ್ರದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿ ನಗರದ ಸ್ವಚ್ಛತೆ ಹಾಗೂ ಪರಿಹಾರ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಳೆ ಸಂಬಂಧ ಪಾಲಿಕೆ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಸ್ಥಳೀಯ ಪ್ರದೇಶದಲ್ಲಿ ಯಾವ ಮನೆಗೆ ನೀರು ನುಗ್ಗಿ, ಬಟ್ಟೆ, ಧವಸ ಧಾನ್ಯ, ವಸತಿ ನೀರಲ್ಲಿ ತೊಯ್ದು ಹಾಳಾಗಿದೆ, ಅಂತಹ ಮನೆಗಳನ್ನು ಗುರುತಿಸಿ 25 ಸಾವಿರ ರೂ. ಚೆಕ್ ಅನ್ನು ಇಂದಿನಿಂದಲೇ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಹೊಸಕೆರೆಹಳ್ಳಿಯ ಭಾಗದಲ್ಲಿ ಸುಮಾರು 650 ರಿಂದ 700 ಮನೆಗಳಿದ್ದು ಅನಾಹುತ ಆದಂತಹ ಎಲ್ಲಾ ಮನೆಗಳಿಗೂ ಪರಿಹಾರ ನೀಡಲಾಗುತ್ತದೆ. ರಾಜಕಾಲುವೆಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿ ಜಲಾವೃತ ಆಗದ ರೀತಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮಳೆ ಅನಾಹುತವಾಗುವ ಎಲ್ಲಾ ಕಡೆ ಕಟ್ಟೆಚ್ಚರ ವಹಿಸಿ ಯಾವುದೇ ರೀತಿಯ ಅನಾಹುತಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೆ ಯಾವುದೇ ಮುಲಾಜಿಲ್ಲದೆ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ತೆರವು ಕಾರ್ಯಾಚರಣೆ ಪ್ರಕ್ರಿಯೆ ಶೀಘ್ರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ದತ್ತಾತ್ರೇಯ ನಗರದಲ್ಲಿ ಎನ್.ಡಿ.ಆರ್.ಆಫ್ ತಂಡ ಶ್ರಮ ವಹಿಸಿ ಕೆಲಸ ಮಾಡಿದ್ದು, ಮೂರು ಮಂದಿಯನ್ನು ಕಾಪಾಡಲಾಗಿದೆ. ದಕ್ಷಿಣ ಭಾಗದ ವ್ಯಾಪ್ತಿಯ ಬಹುತೇಕ ನೀರು ಇದೇ ರಾಜಕಾಲುವೆ ಮೂಲಕ ಹರಿದು ಹೋಗಲಿದೆ. ರಾಜಕಾಲುವೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು, ತಡೆಗೋಡೆಗೆ ಅಳವಡಿಸಿರುವ ಹಳೆಯ ಕಲ್ಲುಗಳನ್ನು ತೆಗೆದು ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದರು.

ಹೊಸಕೆರೆಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಕಳೆದ 15 ವರ್ಷಗಳಿಂದಲೂ ಈ ರೀತಿಯ ಸಮಸ್ಯೆ ಆಗಿರಲಿಲ್ಲ. ಇತ್ತೀಚೆಗೆ, ಪ್ರಮುಖವಾಗಿ ನಾಯಂಡಹಳ್ಳಿ ರಾಜಕಾಲುವೆಗೆ ಎಲ್ಲಾ ಕಡೆಯ ನೀರು ಸೇರಲಿದ್ದು, ಸ್ವಲ್ಪ ಸಮಯದಲ್ಲಿ ಹೆಚ್ಚು ಮಳೆಯಾದ ಪರಿಣಾಮ ಹೆಚ್ಚು ಸಮಸ್ಯೆ ಆಗಿದೆ. 3 ಕಿ.ಮೀ ವ್ಯಾಪ್ತಿಯ ರಾಜಕಾಲುವೆ ಕಾಮಗಾರಿ ಪ್ರಾರಂಭವಾಗಿ 6 ತಿಂಗಳಾಗಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ ಎಂದು ಹೇಳಿದರು.

ಒತ್ತುವರಿ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ
ಮಳೆಗಾಲಕ್ಕೆ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ರಾಜಕಾಲುವೆ ಅಗಲೀಕರಣ, ಒತ್ತುವರಿ ತೆರವು ಕಾರ್ಯಾಚರಣೆ, ಬಾಟಲ್ ನೆಕ್‍ಗಳ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜಕಾಲುವೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ಸಿಎಂಗೆ ಧಿಕ್ಕಾರದ ಸ್ವಾಗತ
ಮಳೆ ಅನಾಹುತ ಪ್ರದೇಶಗಳಾದ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ, ಕುಮಾರಸ್ವಾಮಿ ಬಡಾವಣೆಗೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರ ವಿರುದ್ಧ ನೆರೆ ಸಂತ್ರಸ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನಾಹುತ ಸ್ಥಳಕ್ಕೆ ಬಂದರೆ ಸಾಲದು ಶಾಶ್ವತವಾಗಿ ಪರಿಹಾರ ಒದಗಿಸಿ ಎಂದು ಸ್ಥಳೀಯರು ಒತ್ತಾಯ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News