ಯಡಿಯೂರಪ್ಪರ ಅಧಿಕಾರ ಹೋದರೆ ಮುನಿರತ್ನ ಕಥೆ ಗೋವಿಂದ: ಡಿ.ಕೆ.ಶಿವಕುಮಾರ್

Update: 2020-10-24 12:33 GMT

ಬೆಂಗಳೂರು, ಅ.24: 'ಈ ಚುನಾವಣೆ ಆದ ನಂತರ ಯಡಿಯೂರಪ್ಪನವರನ್ನು ಕೆಳಗಿಳಿಸುತ್ತಾರಂತೆ. ಯಡಿಯೂರಪ್ಪ ಅಧಿಕಾರ ಹೋದರೆ ಮುನಿರತ್ನ ಕಥೆ ಗೋವಿಂದ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಿದ ಅವರು, ಕಳೆದ ಚುನಾವಣೆಯಲ್ಲಿ ನಿಮ್ಮ ಹಾಗೂ ನಮ್ಮ ಶ್ರಮವನ್ನು 50 ಕೋಟಿ ರೂ.ಗೆ ಮಾರಿಕೊಂಡಿದ್ದಾರೆ. ಮಾತೃ ಪಕ್ಷಕ್ಕೆ ದ್ರೋಹ ಮಾಡುವುದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಇದಕ್ಕೆ ಸರಿಯಾಗಿ ಬುದ್ಧಿ ಕಲಿಸಲು ಅವಕಾಶ ಸಿಕ್ಕಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.

ಬಿಜೆಪಿಯವರೆ ಇದೊಂದು ಬಾರಿ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಮುಂದಿನ ಬಾರಿ ಇವರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇವರನ್ನು ಖಾಲಿ ಮಾಡಿಸಿ ಕ್ಷೇತ್ರಕ್ಕೆ ಮುಕ್ತಿ ತಂದುಕೊಡಬೇಕು. ಬಿಜೆಪಿ, ಕಾಂಗ್ರೆಸ್, ದಳದ ಕಾರ್ಯಕರ್ತರಿಗೆ ಮುಕ್ತಿ ಸಿಗಬೇಕು ಎಂದರೆ ಒಂದೇ ದಾರಿ ಅದು ಕುಸುಮಾ ಅವರ ಗೆಲುವು ಎಂದು ಶಿವಕುಮಾರ್ ಹೇಳಿದರು.

ಈ ಚುನಾವಣೆಗಾಗಿ 25 ಕೋಟಿ ರೂ.ಕೊಟ್ಟಿದ್ದಾರಂತೆ. ಅವರು ದುಡ್ಡು ಕೊಟ್ಟರೆ ಯಾರೊಬ್ಬರೂ ಬೇಡ ಅನ್ನ ಬೇಡಿ. ಎಲ್ಲರೂ ಹಣ ತೆಗೆದುಕೊಳ್ಳಿ. ಬಿಜೆಪಿ ನೋಟು, ಕಾಂಗ್ರೆಸ್‍ಗೆ ಓಟು. ಮುನಿರತ್ನನ ನೋಟು ಕುಸುಮಾಗೆ ಓಟು ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಅವರು ಹೇಳಿದರು.

ಎಲ್ಲ ಹೆಣ್ಣು ಮಕ್ಕಳು, ಯುವಕರು, ಎಲ್ಲ ವರ್ಗದವರು ಈ ಹೆಣ್ಣು ಮಗಳಿಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ಈ ಕ್ಷೇತ್ರದಲ್ಲಿರುವ ಕೆಟ್ಟ ಹುಳುವನ್ನು ತೆಗಿಯಬೇಕು. ಬಿಜೆಪಿ ಅಭ್ಯರ್ಥಿ ಸೋತರೆ ಪೊಲೀಸಿನವರಿಗೂ ಖುಷಿಯಾಗುತ್ತದೆ. ಅವರು ಒಳಗೊಳಗೇ ಕಾಯುತ್ತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಯಾರಿಗಾದರೂ 15 ಲಕ್ಷ ರೂ.ಬಂತಾ? ಚಾಲಕರು, ಸವಿತಾ ಸಮಾಜದವರಿಗೆ ಘೋಷಿಸಿದ 5 ಸಾವಿರ ರೂ.ಬಂತಾ? ಯಾವುದು ಬಂದಿಲ್ಲ. ಹೀಗಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕುಸುಮಾ ಅವರನ್ನು ಗೆಲ್ಲಿಸಿ ಎಂದು ಶಿವಕುಮಾರ್ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News