ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯವಿಲ್ಲ: ಡಿ.ಕೆ.ಶಿವಕುಮಾರ್

Update: 2020-10-24 12:41 GMT

ಬೆಂಗಳೂರು, ಅ. 24: `ನಮಗೆ ಜಾತಿಯನ್ನು ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ. ತನ್ನನ್ನು ಬೆಳೆಸಿದ ಪಕ್ಷಕ್ಕೆ ಮೋಸ ಮಾಡಿದ್ದು, ಹೆತ್ತ ತಾಯಿಗೆ ದ್ರೋಹ ಬಗೆದಿದ್ದಾರೆ. ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಇಲ್ಲಿನ ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಎಚ್. ಅವರ ಪರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆ ಯಾವ ಕಾರಣಕ್ಕೆ ಬಂದಿದೆ? ಹಣ ಹಾಗೂ ಅಧಿಕಾರದ ಆಸೆಗೆ ಮತದಾರರಿಗೆ, ತನ್ನನ್ನು ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಇಲ್ಲಿನ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಡುತ್ತೇವೆ. ಕ್ಷೇತ್ರದ ಮತದಾರ ಬದಲಾವಣೆ ಬಯಸಿದ್ದು, ಇವರಿಗೆ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಎಚ್ಚರಿಸಿದರು.

ಕಷ್ಟಪಟ್ಟು ಪಕ್ಷ ಕಟ್ಟಿದ ಬಿಜೆಪಿ ಕಾರ್ಯಕರ್ತರಿಗೆ, ನಾಯಕರಿಗೆ ಅಧಿಕಾರ ಇಲ್ಲ. ತಮ್ಮ ಮಾತೃಪಕ್ಷಕ್ಕೆ ದ್ರೋಹ ಬಗೆದವರಿಗೆ ಯಡಿಯೂರಪ್ಪನವರು ಅಧಿಕಾರ ನೀಡಿದ್ದಾರೆ. ಕಳೆದೊಂದು ವರ್ಷದಿಂದ ಈ ಬಿಜೆಪಿ ಅಭ್ಯರ್ಥಿಯನ್ನು ಮನೆಯಲ್ಲಿ ಕೂರಿಸಿದ್ದರು. ಹೀಗಾಗಿ ಜನರ ಆಕ್ರೋಶಕ್ಕೆ ಹೆದರಿ ಯಡಿಯೂರಪ್ಪನವರು ಬಿಜೆಪಿ ನಾಯಕರು ಇಲ್ಲಿ ಪ್ರಚಾರಕ್ಕೆ ಬಂದಿಲ್ಲ ಎಂದು ಶಿವಕುಮಾರ್ ತಿರುಗೇಟು ನೀಡಿದರು.

`ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಶಾಸಕರು ಬರಲು ಸಿದ್ಧವಾಗಿದ್ದಾರೆ ಎನ್ನುತ್ತಿದ್ದಾರೆ. ಅವರು ಆದಷ್ಟು ಬೇಗ ಆ ಕೆಲಸ ಮಾಡಲಿ. ತಡ ಮಾಡಬಾರದು. ಯಾರೆಲ್ಲ ಬರುತ್ತಾರೋ ಅವರನ್ನು ಕರೆದುಕೊಂಡು ಹೋಗಲಿ. ಒಂದಿಬ್ಬರು ಮಾತ್ರವಲ್ಲ, ನಮ್ಮ ಪಕ್ಷದಲ್ಲಿರುವ ಎಲ್ಲರನ್ನು ಕರೆದುಕೊಂಡು ಹೋಗಲಿ' ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News