ಡಿಕೆಶಿ ಜಾತಿ ರಾಜಕಾರಣ ಮಾಡುವ ಸಣ್ಣತನ ಬಿಡಬೇಕು: ಬಿಜೆಪಿ ಅಭ್ಯರ್ಥಿ ಮುನಿರತ್ನ

Update: 2020-10-24 14:12 GMT

ಬೆಂಗಳೂರು, ಅ.24: ಎಲ್ಲ ಜಾತಿ, ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು ಮುಖ್ಯಮಂತ್ರಿಯಾಗುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಾತಿ ಹೆಸರಲ್ಲಿ ರಾಜಕಾರಣ ಮಾಡುವ ಸಣ್ಣತನ ಬಿಡಬೇಕು ಎಂದು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿಳಿಸಿದ್ದಾರೆ.

ಶನಿವಾರ ಆರ್.ಆರ್.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಆಗ ಒಂದು ದಿನವೂ ನನ್ನ ವಿರುದ್ಧ ಅಂತಹ ಆಪಾದನೆ ಕೇಳಿ ಬಂದಿಲ್ಲ. ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟನೆ ಸಂದರ್ಭದಲ್ಲಿ ಇದೇ ಡಿ.ಕೆ.ಶಿವಕುಮಾರ್ ನನ್ನನ್ನು ಹಾಡಿ ಹೊಗಳಿದ್ದರು. ಈಗ ಜಾತಿಯ ಬಗ್ಗೆ ಮಾತನಾಡಿ ಸಣ್ಣತನ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು.

ಜಾತಿ, ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ. ಈಗಾಗಲೆ, ಲಿಂಗಾಯತರನ್ನು ಒಡೆದಾಳಲು ಹೋಗಿ ಕಾಂಗ್ರೆಸ್ ತನ್ನ ಸರಕಾರವನ್ನೆ ಕಳೆದುಕೊಂಡಿತು. ದೂರದೃಷ್ಟಿಯಿಲ್ಲದ ಡಿ.ಕೆ.ಶಿವಕುಮಾರ್, ಕೆಂಪೇಗೌಡರ ಇತಿಹಾಸವನ್ನು ಅರ್ಥ ಮಾಡಿಕೊಂಡು ರಾಜಕಾರಣ ಮಾಡಲಿ ಎಂದು ಮುನಿರತ್ನ ಹೇಳಿದರು.

ಗೌಡ ಎಂದು ನಮೂದಿಸಿರುವ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವಷ್ಟು ಕೆಳಮಟ್ಟಕ್ಕೆ ನಾನು ಇಳಿದಿಲ್ಲ. ಕಾಂಗ್ರೆಸ್ ನಾಯಕರ ಈ ಸಂಕುಚಿತ ಹೇಳಿಕೆಗಳಿಂದ ಮನಸ್ಸಿಗೆ ನೋವಾಗಿದೆ. ನಾನು ಎಂದಿಗೂ ಅಂತಹ ನೀಚ ಕೆಲಸಕ್ಕೆ ಹಾಕಿಲ್ಲ, ನನ್ನ ಸಂಸ್ಕೃತಿಯು ಅದಲ್ಲ ಎಂದು ಅವರು ಹೇಳಿದರು.

ಬಿಜೆಪಿಯಿಂದ ಮುನಿರಾಜುಗೌಡ ಅಭ್ಯರ್ಥಿಯಾಗಿದ್ದರೆ ಪರವಾಗಿರಲಿಲ್ಲ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ತಂದೆ ಹನುಮಂತರಾಯಪ್ಪ ವಿರುದ್ಧ ಕಿಡಿಗಾರಿದ ಮುನಿರತ್ನ, ಮುನಿರಾಜು ಗೌಡರನ್ನು ಈ ಹಿಂದಿನ ಚುನಾವಣೆಯಲ್ಲಿ ಸೋಲಿಸಲು ರಾಮಚಂದ್ರಪ್ಪ ಪರವಾಗಿ ಹನುಮಂತರಾಯಪ್ಪ ಹಗಲು ರಾತ್ರಿ ಕೆಲಸ ಮಾಡಿದ್ದು ಮರೆತು ಬಿಟ್ಟಿದ್ದಾರೆಯೇ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News