‘ಗುಪ್ಕರ್ ಗ್ಯಾಂಗ್’ನ ಪಿತೂರಿಗಳನ್ನು ಸಹಿಸುವುದಿಲ್ಲ: ಜಮ್ಮು- ಕಾಶ್ಮೀರ ಬಿಜೆಪಿ ಅಧ್ಯಕ್ಷ

Update: 2020-10-24 14:19 GMT

ಜಮ್ಮು,ಅ.24: ‘ಗುಪ್ಕರ್ ಗ್ಯಾಂಗ್’ನ ಪಿತೂರಿಗಳನ್ನು ಸಹಿಸುವುದಿಲ್ಲ ಮತ್ತು ದೇಶದ ಏಕತೆ ಹಾಗೂ ಸಮಗ್ರತೆಯನ್ನು ಪ್ರಶ್ನಿಸುವವರನ್ನು ಜೈಲಿಗಟ್ಟಲಾಗುವುದು ಎಂದು ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರು ಶನಿವಾರ ಇಲ್ಲಿ ಹೇಳಿದರು.

ಜಮ್ಮು-ಕಾಶ್ಮೀರವು ಭಾರತದ ಅಖಂಡ ಭಾಗವಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಸಾರಲು ಅ.26ನ್ನು ‘ವಿಲೀನ ದಿನ’ವನ್ನಾಗಿ ಆಚರಿಸಲಾಗುವುದು ಎಂದೂ ಅವರು ಹೇಳಿದರು.

1947,ಅ.26ರಂದು ಮಹಾರಾಜ ಹರಿಸಿಂಗ್ ಅವರು ಭಾರತದೊಂದಿಗೆ ಜಮ್ಮು-ಕಾಶ್ಮೀರದ ವಿಲೀನಕ್ಕೆ ಅಂಕಿತ ಹಾಕಿದ್ದರು.

ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ವಿರುದ್ಧ ದಾಳಿ ನಡೆಸಿದ ರೈನಾ,ಭಾರತದಲ್ಲಿ ತಮಗೆ ತೊಂದರೆಯಿದೆ ಮತ್ತು ಅಭದ್ರತೆಯಿದೆ ಎಂದು ಭಾವಿಸುವವರು ಪಾಕಿಸ್ತಾನಕ್ಕೆ ಹೋಗಬೇಕು. ಜಮ್ಮು-ಕಾಶ್ಮೀರ ಅವರ ಜಹಗೀರಲ್ಲ. ಸಂವಿಧಾನದ ವಿಧಿ 370 ಮತ್ತು ಹಿಂದಿನ ಜಮ್ಮು-ಕಾಶ್ಮೀರದ ರಾಜ್ಯಧ್ವಜವನ್ನು ಮರುಸ್ಥಾಪಿಸಲು ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರೈನಾ,‘ಈ ಸಲ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ನಮ್ಮೊಂದಿಗಿದ್ದಾರೆ. ದೇಶದ ವಿರುದ್ಧ ಪಿತೂರಿ ನಡೆಸುವವರನ್ನು ಕ್ಷಮಿಸಲಾಗುವುದಿಲ್ಲ. ನಮ್ಮ ತಾಯ್ನಾಡು ಮತ್ತು ತ್ರಿವರ್ಣ ಧ್ವಜಕ್ಕಾಗಿ ನಾವು ನಮ್ಮ ರಕ್ತ ಮತ್ತು ಜೀವವನ್ನು ನೀಡುತ್ತೇವೆ ’ಎಂದರು.

ಹಿಂದಿನ ಜಮ್ಮು-ಕಾಶ್ಮೀರ ರಾಜ್ಯಧ್ವಜವು ಮರುಸ್ಥಾಪನೆಗೊಂಡ ಬಳಿಕವೇ ತಾನು ರಾಷ್ಟ್ರಧ್ವಜವನ್ನು ಎತ್ತಿಹಿಡಿಯುವುದಾಗಿ ಮುಫ್ತಿಯವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು,ಈ ಕೇಂದ್ರಾಡಳಿತ ಪ್ರದೇಶದಲ್ಲಿ ತ್ರಿವರ್ಣ ಧ್ವಜವು ಮಾತ್ರ ಹಾರಾಡಲಿದೆ. ಮುಫ್ತಿಯವರು ರಾಷ್ಟ್ರಧ್ವಜವನ್ನು ಹಿಡಿಯದಿದ್ದರೇನು? ರಾಷ್ಟ್ರಧ್ವಜವನ್ನು ತಮ್ಮ ಹೃದಯಾಂತರಾಳದಿಂದ ಪ್ರೀತಿಸುವ ಕೋಟ್ಯಂತರ ಜನರು ಜಮ್ಮು-ಕಾಶ್ಮೀರದಲ್ಲಿದ್ದಾರೆ ಎಂದರು.

ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ನಾಯಕರನ್ನು ಉಲ್ಲೇಖಿಸಿದ ರೈನಾ, ‘ಅವರು ತಾವು ಅಧಿಕಾರದಲ್ಲಿದ್ದಾಗ ಭಾರತವನ್ನು ಹೊಗಳುತ್ತಾರೆ ಮತ್ತು ಅಧಿಕಾರವನ್ನು ಕಳೆದುಕೊಂಡಾಗ ಅವರಿಗೆ ಪಾಕಿಸ್ತಾನ ಮತ್ತು ಚೀನಾ ನೆನಪಾಗುತ್ತವೆ. ಅವರಿಗೆ ತಮ್ಮ ಭಾರತ ವಿರೋಧಿ ಅಜೆಂಡಾ ಮುಂದುವರಿಸಲು ಅವಕಾಶ ನೀಡುವುದಿಲ್ಲ. ಅವರು ಪ್ರಯತ್ನಿಸಲಿ,ಗುಪ್ಕರ್ ಗ್ಯಾಂಗ್‌ನಲ್ಲಿಯ ಪಕ್ಷಗಳ ಸಂಖ್ಯೆ ಆರರಿಂದ ಆರು ನೂರಕ್ಕೆ ಹೆಚ್ಚಲಿ, ಅವರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ನಾವು ಬಿಡುವುದಿಲ್ಲ. ಅವರು ಅಧಿಕಾರದಾಹಿಗಳಾಗಿದ್ದಾರೆ ಮತ್ತು ಜಮ್ಮು-ಕಾಶ್ಮೀರದ ಜನರಿಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ ’ಎಂದರು.

ಇತ್ತೀಚಿಗಷ್ಟೇ ಬಂಧನದಿಂದ ಬಿಡುಗಡೆಗೊಂಡಿರುವ ಮುಫ್ತಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯಧ್ವಜದ ಮರುಸ್ಥಾಪನೆಯಾಗುವವರೆಗೆ ಚುನಾವಣೆಗಳಲ್ಲಿ ಸ್ಫರ್ಧಿಸಲು ಮತ್ತು ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯಲು ತನಗೆ ಆಸಕ್ತಿಯಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News