ಅತ್ಯಾಚಾರ ತಡೆಗಟ್ಟಲು 'ಕಾನೂನು ತಿದ್ದುಪಡಿ'ಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಮಾನ

Update: 2020-10-24 15:37 GMT

ಬೆಂಗಳೂರು, ಅ. 24: ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ತಡೆಗಟ್ಟಲು ಕಾನೂನು ತಿದ್ದುಪಡಿ, ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು ಆಗ್ರಹಿಸಿ ಒಂದು ಲಕ್ಷ ಸಹಿ ಸಂಗ್ರಹಿಸಿ, ರಾಷ್ಟ್ರಪತಿಯವರಿಗೆ ಸಲ್ಲಿಸಲು ವಿವಿಧ ಸಂಘಟನೆಗಳ ಹಮ್ಮಿಕೊಂಡಿರುವ ಅಭಿಯಾನಕ್ಕೆ ಇಲ್ಲಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಂ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.

ಶನಿವಾರ ಸಂಜೆ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ರಜನಿ ಸಂತೋಷ್, ದೇಶದಲ್ಲಿ ಪ್ರತಿ 19 ನಿಮಿಷಕ್ಕೆ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಅತ್ಯಂತ ವಿಕೃತ ರೀತಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಮಹಿಳೆಯರ ಮೇಲಿನ ಹಿಂಸೆ ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.

ಹೆಣ್ಣು ಮಕ್ಕಳು ನಿರ್ಭೀತಿಯಿಂದ ಬದುಕುವಂತಹ ವ್ಯವಸ್ಥೆ ಮತ್ತು ಅವರ ಸುರಕ್ಷತೆಗೆ ಆದ್ಯತೆ ನೀಡಬೇಕು. ಜೊತೆಗೆ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸರಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲಿನ ದೌರ್ಜನ್ಯ ನಡೆಸಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.

ಸಹಿ ಸಂಗ್ರಹ ಅಭಿಮಾನದಲ್ಲಿ ಮಾನವ ಹಕ್ಕುಗಳ ಸಂಘಟನೆಗಳು, ಭ್ರಷ್ಟಾಚಾರ ವಿರೋಧಿ ವೇದಿಕೆ, ರಜನಿಕಾಂತ್ ಅಭಿಮಾನಿಗಳ ಸಂಘ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News