ಕಲಾ ನಿರ್ದೇಶಕ ಜಿ.ಮೂರ್ತಿ ನಿಧನ

Update: 2020-10-24 15:53 GMT

ಬೆಂಗಳೂರು, ಅ.24: ಕಲಾ ನಿರ್ದೇಶಕ, ಚಿತ್ರನಿರ್ದೇಶಕ ಜಿ.ಮೂರ್ತಿ(56) ಮನೆಯಲ್ಲಿ ಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಇಂದು(ಶನಿವಾರ) ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಕನ್ನಡ ಚಿತ್ರರಂಗವು ಅತ್ಯುತ್ತಮ ಕಲಾ ನಿರ್ದೇಶಕನೊಬ್ಬನನ್ನು ಕಳೆದುಕೊಂಡಿದೆ ಎಂದು ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಮಾರು 80ಕ್ಕೂ ಹೆಚ್ಚು ಸಿನೆಮಾಗಳಿಗೆ ಕಲಾ ನಿರ್ದೇಶನ ಮಾಡಿರುವ ಅವರು, ಹಿರಿಯ ಚಿತ್ರ ನಿರ್ದೇಶಕ ಜಿ.ವಿ.ಅಯ್ಯರ್ ಅವರ ನಿಕಟವರ್ತಿಯಾಗಿದ್ದರು. ಕನ್ನಡ ಸಿನೆಮಾ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಿಗೂ ಕಲಾ ನಿರ್ದೇಶನ ಮಾಡಿ ದೇಶದ ಸಿನೆಮಾ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯಗೊಂಡಿದ್ದರು.

ಚಂದ್ರಚಕೋರಿ ಹಾಗೂ ಕುರುನಾಡು ಚಿತ್ರಗಳಿಗೆ ಮಾಡಿದ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದ ಅವರು, ಶಂಕರ ಪುಣ್ಯಕೋಟಿ ಸಿನೆಮಾದ ನಿರ್ದೇಶನಕ್ಕಾಗಿ ಮೊತ್ತೊಂದು ಸಲ ರಾಜ್ಯಪ್ರಶಸ್ತಿ ಪಡೆದಿದ್ದರು.

ಹಳ್ಳಿಯ ಮಕ್ಕಳು, ಅರಳುವ ಹೂಗಳು, ಸಿದ್ದಗಂಗ, ಸುಂಗಂಧಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದು, ಅವರು ಸಿನೆಮಾಗಳು ದೇಶ, ವಿದೇಶಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿವೆ. ಮುಖ್ಯವಾಗಿ ಅವರು ನಿರ್ದೇಶಿಸಿದ ಬಿಂಬ ಚಿತ್ರವು ಒಂದೇ ಶಾಟ್‍ನಲ್ಲಿ ಒಬ್ಬನೇ ಕಲಾವಿದ ಅಭಿನಯಿಸಿದ ಜಗತ್ತಿನ ಮೊದಲ ಸಿನೆಮಾವಾಗಿ ದಾಖಲಾಗಿರುವುದು ಇವರ ಸೃಜನಶೀಲತೆಗೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News