ಕೊರೋನ: ದೇಶದಲ್ಲಿ ಚೇತರಿಕೆಯ ಪ್ರಮಾಣ ಶೇ. 89.78ಕ್ಕೆ ಏರಿಕೆ

Update: 2020-10-24 16:49 GMT

ಹೊಸದಿಲ್ಲಿ, ಅ.24: ದೇಶದಲ್ಲಿ ಕೊರೋನ ಸೋಂಕು ಚೇತರಿಕೆಯಲ್ಲಿ ಶೇ 61 ಪ್ರಕರಣ 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಶನಿವಾರ ಹೇಳಿದೆ. ಇದುವರೆಗೆ 70,16,046 ಜನರು ಕೊರೋನದಿಂದ ಚೇತರಿಸಿಕೊಂಡಿದ್ದು ಚೇತರಿಕೆಯ ಪ್ರಮಾಣ ಶೇ 89.78ಕ್ಕೆ ಏರಿದೆ. ಇದರಲ್ಲಿ ಶೇ61 ದಷ್ಟು ಚೇತರಿಕೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರಪ್ರದೇಶ ಮತ್ತು ದಿಲ್ಲಿಯಲ್ಲಿ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಒಟ್ಟು ಚೇತರಿಕೆಯಲ್ಲಿ ಮಹಾರಾಷ್ಟ್ರ (ಶೇ. 20.6), ಆಂಧ್ರಪ್ರದೇಶ (ಶೇ. 10.9), ಕರ್ನಾಟಕ (ಶೇ. 9.9), ತಮಿಳುನಾಡು (ಶೇ. 9.4), ಉತ್ತರಪ್ರದೇಶ (ಶೇ. 6.1) ಮತ್ತು ದಿಲ್ಲಿ (ಶೇ. 4.1) ಮೊದಲ 6 ಸ್ಥಾನದಲ್ಲಿದೆ. ಕಳೆದ ಕೆಲವು ದಿನಗಳಿಂದ ಹೊಸ ಸೋಂಕು ಪ್ರಕರಣಗಳಿಗಿಂತ ಚೇತರಿಕೆಯ ಪ್ರಮಾಣ ಹೆಚ್ಚಿದೆ. ಶನಿವಾರದ ವರೆಗಿನ 24 ಗಂಟೆಗಳ ಅವಧಿಯಲ್ಲಿ 67,549 ರೋಗಿಗಳು ಗುಣಮುಖರಾಗಿದ್ದರೆ 53,370 ಹೊಸ ಪ್ರಕರಣ ದಾಖಲಾಗಿದೆ. ಹೊಸ ಪ್ರಕರಣಗಳಲ್ಲಿ ಶೇ. 80 ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ದಾಖಲಾಗಿದ್ದು ಕೇರಳದಲ್ಲಿ 8000ಕ್ಕೂ ಹೆಚ್ಚು ಮತ್ತು ಮಹಾರಾಷ್ಟ್ರದಲ್ಲಿ 5,000ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣ ದಾಖಲಾಗಿದೆ. ಕೊರೋನ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1,17,956ಕ್ಕೇರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 6,80,680 ಆಗಿದ್ದು ಮರಣದ ಪ್ರಮಾಣ ಶೇ. 1.51ಕ್ಕೆ ಇಳಿದಿದೆ ಎಂದು ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News