ಹೆಲ್ಮೆಟ್ ಧರಿಸದ್ದಕ್ಕೆ ತನ್ನನ್ನು ತಡೆದ ಪೊಲೀಸ್ ಗೆ ಥಳಿಸಿದ ಮಹಿಳೆ!

Update: 2020-10-24 18:03 GMT

ಮುಂಬೈ: ದಕ್ಷಿಣ ಮುಂಬೈಯ ಕಲ್ಬಾದೇವಿಯಲ್ಲಿ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ದಂಡ ವಿಧಿಸಲು ಮುಂದಾದ ಟ್ರಾಫಿಕ್ ಪೊಲೀಸ್ ಗೆ ಮಹಿಳೆಯೊಬ್ಬರು ಥಳಿಸಿರುವ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಮಹಿಳೆಯು ಟ್ರಾಫಿಕ್ ಪೊಲೀಸ್ ಗೆ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಸೇನೆ ನಾಯಕ ಸಂಜಯ್ ರಾವತ್ ಘಟನೆಯ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದು ಮುಂಬೈಯ ಗೌರವದ ವಿಚಾರವಾಗಿದ್ದು, ಮಹಿಳೆಯ ವಿರುದ್ದ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಪೋಸ್ಟ್ ನ್ನು ಗೃಹ ಸಚಿವ ಅನಿಲ್ ದೇಶ್ ಮುಖ್ ಗೆ ಟ್ಯಾಗ್ ಮಾಡಿದ್ದಾರೆ.

ಕಲ್ಬಾದೇವಿಯ ಕಾಟನ್ ಎಕ್ಸ್ ಚೇಂಜ್ ನಾಕಾದಲ್ಲಿ ಶುಕ್ರವಾರ ಮಧ್ಯಾಹ್ನ ಈ  ಘಟನೆ ನಡೆದಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಯನ್ನು ಟ್ರಾಫಿಕ್ ಪೊಲೀಸ್ ಏಕನಾಥ ಪಾರ್ಥಿ ತಡೆದಿದ್ದರು. ದಂಡ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಾರ್ವಜನಿಕರ ಎದುರಿನಲ್ಲೇ ಮಹಿಳೆಯು ಪೊಲೀಸ್ ಗೆ ಥಳಿಸಿದ್ದರು. ನೆರೆದಿದ್ದ ಜನರು ಈ ಘಟನೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಪೊಲೀಸರಿಗೆ ಥಳಿಸಿದ ಮಹಿಳೆಯನ್ನು ಸಾದ್ವಿಕಾ ರಮಾಕಾಂತ್ ತಿವಾರಿ(30) ಎಂದು ಗುರುತಿಸಲಾಗಿದೆ. ತಿವಾರಿ ಹಾಗೂ ಆಕೆಯೊಂದಿಗಿದ್ದ ಮೊಹ್ಸಿನ್ ಖಾನ್(26)ನನ್ನು ಲೋಕಮಾನ್ಯ ತಿಲಕ್ ಪೊಲೀಸ್ ಸ್ಟೇಶನ್ ಗೆಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News