ಭ್ರಷ್ಟಾಚಾರ ತಡೆ ತಿದ್ದುಪಡಿ ಕಾಯ್ದೆ ಬಳಿಕ ಸಿಬಿಐ ದಾಖಲಿಸಿದ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಶೇ. 40 ಇಳಿಕೆ

Update: 2020-10-26 18:48 GMT

ಹೊಸದಿಲ್ಲಿ, ಅ. 26: 2018 ಜುಲೈಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ಮಾಡಿದ ಬಳಿಕ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. 2017 (ಕಾಯ್ದೆ ತಿದ್ದುಪಡಿಗೆ ಒಂದು ವರ್ಷ ಮೊದಲು)ರಲ್ಲಿ ದಾಖಲಿಸಲಾದ ಪ್ರಕರಣಗಳಿಗೆ ಹೋಲಿಸಿದರೆ ಕಳೆದ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆ ಸುಮಾರು ಶೇ. 40ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ವಿಚಕ್ಷಣಾ ಆಯೋಗದೊಂದಿಗೆ ಸಿಬಿಐ ಹಂಚಿಕೊಂಡಿರುವ ದತ್ತಾಂಶ ಹೇಳಿದೆ. 

ಮೊದಲ ನೋಟಕ್ಕೆ ಈ ಕಾಯ್ದೆ ಉತ್ತಮ ಎಂದು ಕಾಣುತ್ತದೆ. ಭ್ರಷ್ಟಾಚಾರ ಪ್ರಕರಣಗಳ ಮಟ್ಟದಲ್ಲಿ ಇಳಿಕೆಯಾಗಿರುವುದು ಪ್ರಶಂಸನೀಯ. ಆದರೆ, ಈ ತಿದ್ದುಪಡಿಯ ಪ್ರಮುಖ ಅಂಶವಾದ ಪರಿಚ್ಛೇದ 17ಎ ಬಗ್ಗೆ ಗಮನ ಹರಿಸುವುದು ಉತ್ತಮ. ಪರಿಚ್ಛೇದ 17ಎ ಪ್ರಕಾರ ಯಾವುದೇ ಸರಕಾರಿ ಸಿಬ್ಬಂದಿ ಅಪರಾಧ ಎಸಗಿದರೆ ಯಾವುದೇ ಪೊಲೀಸ್ ಅಧಿಕಾರಿ ತನಿಖೆ ನಡೆಸುವಂತಿಲ್ಲ. ಭ್ರಷ್ಟ ಸರಕಾರಿ ಸಿಬ್ಬಂದಿಯ ತನಿಖೆ ನಡೆಸಲು ಸಿಬಿಐಗೆ ಸರಕಾರದ ಅನುಮತಿ ಅಗತ್ಯ. ಆದರೆ, ಸರಕಾರಿ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದರೆ ಈ ಕಾಯ್ದೆ ನಿಯಮ ಅನ್ವಯಿಸುವುದಿಲ್ಲ. 2019ರಲ್ಲಿ ಸಿಬಿಐ ದಾಖಲಿಸಿದ 710 ಪ್ರಕರಣ (103 ಪ್ರಾಥಮಿಕ ವಿಚಾರಣೆ ಸೇರಿದಂತೆ)ಗಳಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಿದ ಪ್ರಕರಣಗಳು 396. ಈ 396 ಪ್ರಕರಣಗಳಲ್ಲಿ 116 ಪ್ರಕರಣಗಳ ತನಿಖೆಗೆ ಪರಿಚ್ಛೇದ 17ಎ ಅಡಿಯಲ್ಲಿ ಸರಕಾರದಿಂದ ಅನುಮತಿ ಅಗತ್ಯವಿಲ್ಲ. ಉಳಿದ ಪ್ರಕರಣಗಳಿಗೆ ಸರಕಾರದ ಅನುಮತಿ ಅಗತ್ಯ. ಇದರ ಪರಿಣಾಮ ಕಳೆದ ವರ್ಷ ಸಿಬಿಐ ಕೇವಲ 280 ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿದೆ. ಅದು ಕೂಡ ಸರಕಾರದ ಅನುಮತಿಯ ಬಳಿಕವಷ್ಟೇ ಈ ಪ್ರಕರಣಗಳನ್ನು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News