ರೈತರ ರೈಲ್ ರೋಕೋ ಪ್ರತಿಭಟನೆ ಹಿನ್ನೆಲೆ: ಪಂಜಾಬ್‍ಗೆ ಗೂಡ್ಸ್ ರೈಲು ಓಡಿಸದೇ ಇರಲು ನಿರ್ಧರಿಸಿದ ರೈಲ್ವೆ

Update: 2020-10-27 07:18 GMT
ಫೈಲ್ ಚಿತ್ರ

ಅಮೃತಸರ್ : ಪಂಜಾಬ್‍ನ ಅಮೃತಸರ್ ಜಿಲ್ಲೆಯ ಜಂಡಿಯಾಲ ಗುರು ಎಂಬಲ್ಲಿ ಕೇಂದ್ರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರು ಈಗಲೂ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿರುವುದರಿಂದ ಹಳಿಯನ್ನು ಸಂಪೂರ್ಣ ತೆರವುಗೊಳಿಸುವ ತನಕ ಪಂಜಾಬ್ ರಾಜ್ಯಕ್ಕೆ ಯಾವುದೇ ಗೂಡ್ಸ್ ರೈಲಿನ ಸಂಚಾರ ನಡೆಸದೇ ಇರಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ಹಿಂದೆ ಅಕ್ಟೋಬರ್ 24 ಹಾಗೂ 25ರಂದು ಪಂಜಾಬ್‍ಗೆ ಯಾವುದೇ ಗೂಡ್ಸ್ ರೈಲು ಸಂಚಾರವಿರುವುದಿಲ್ಲವೆಂದು ಭಾರತೀಯ ರೈಲ್ವೆ ಹೇಳಿದ್ದರೆ ಇದೀಗ ಇದನ್ನು ಅಕ್ಟೋಬರ್ 29ರ ತನಕ ವಿಸ್ತರಿಸಲಾಗಿದೆ ಎಂದು  ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 24ರಂದು ಆರು ಕಡೆಗಳಲ್ಲಿ ರೈತರು ರೈಲ್ ರೋಕೋ ಚಳುವಳಿ ಆರಂಭಿಸಿದ್ದರೆ ಅದನ್ನು ನಂತರ ಎರಡು ಕಡೆಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಅಕ್ಟೋಬರ್ 1ರಿಂದ  ಪಂಜಾಬ್ ರಾಜ್ಯದ 33 ಕಡೆಗಳಲ್ಲಿ ರೈಲ್ ರೋಕೋ ಚಳುವಳಿ ಆರಂಭಗೊಂಡಿದ್ದರಿಂದ ಯಾವುದೇ ಗೂಡ್ಸ್ ಹಾಗೂ ಪ್ಯಾಸೆಂಜರ್ ರೈಲುಗಳ ಓಡಾಟ ಸಾಧ್ಯವಿಲ್ಲದಂತಾಗಿತ್ತು. ನಂತರ ಅಕ್ಟೋಬರ್ 21ರೊಳಗಾಗಿ ಈ ಎಲ್ಲಾ ಕಡೆಗಳಲ್ಲಿ ಚಳುವಳಿಯನ್ನು ಸ್ಥಗಿತಗೊಳಿಸಲಾಯಿತಾದರೂ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ  ಅಮೃತಸರ್ ನ ಜಂಡಿಯಾಲ ಗುರು ಎಂಬಲ್ಲಿ ಹೊಸತಾಗಿ ರೈಲ್ ರೋಕೋ ನಡೆಸಿರುವುದು ರೈಲ್ವೆ ಇಲಾಖೆಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್‍ಗೆ ಯಾವುದೇ ಗೂಡ್ಸ್ ರೈಲು ಓಡಿಸದೇ ಇರಲು ರೈಲ್ವೆ ಇಲಾಖೆ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News