ಹತ್ರಸ್ ಘಟನೆ: ಅಲಹಾಬಾದ್ ಹೈಕೋರ್ಟ್‌ಗೆ ತನಿಖೆಯ ಮೇಲ್ವಿಚಾರಣೆ ವಹಿಸಿದ ಸುಪ್ರೀಂಕೋರ್ಟ್

Update: 2020-10-27 16:46 GMT

ಹೊಸದಿಲ್ಲಿ: ಉತ್ತರಪ್ರದೇಶದ ಹತ್ರಸ್‌ನಲ್ಲಿ ನಡೆದ 19 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ಅಲಹಾಬಾದ್ ಹೈಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ. ಸಿಬಿಐ ತನಿಖಾಧಿಕಾರಿಗಳು ನಿಯಮಿತ ವರದಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಿದ್ದಾರೆ ಎಂದು ಇಂದು ಸುಪ್ರೀಂಕೋರ್ಟ್ ಹೇಳಿದೆ.

  ಮನವಿಗಳ ಗುಚ್ಛದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ‘‘ಉಚ್ಚ ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸುತ್ತಿದೆ ಹಾಗೂ ಸಿಬಿಐ ಉಚ್ಚ ನ್ಯಾಯಾಲಯಕ್ಕೆ ವರದಿ ನೀಡಲಿದೆ’ ಎಂದರು.

‘‘ತನಿಖೆ ಪೂರ್ಣಗೊಂಡರೆ, ವಿಚಾರಣೆಯನ್ನು ಉತ್ತರಪ್ರದೇಶದಿಂದ ವರ್ಗಾವಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸಬಹುದು.  ಸಿಬಿಐನಂತಹ ಸ್ವತಂತ್ರ ಏಜೆನ್ಸಿ ಈ ಪ್ರಕರಣವನ್ನು ಈಗ ತನಿಖೆ ನಡೆಸುತ್ತಿದೆ. ಹೀಗಾಗಿ ಸ್ಥಳೀಯ ಪೊಲೀಸರ ಹಸ್ತಕ್ಷೇಪದ ಆತಂಕಗಳು ಇನ್ನು ಮುಂದೆ ಉದ್ಭವಿಸುವುದಿಲ್ಲ'' ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಹಾಗೂ ಪ್ರಕರಣವನ್ನು ಉತ್ತರಪ್ರದೇಶ ದಿಂದ ದಿಲ್ಲಿಗೆ ವರ್ಗಾಯಿಸಲು ಕೋರಿ ಸಾಮಾಜಿಕ ಕಾರ್ಯಕರ್ತ ಸತ್ಯಮಾ ದುಬೆ ಹಾಗೂ ವಕೀಲರಾದ ವಿಶಾಲ್ ಠಾಕ್ರೆ ಹಾಗೂ ರುದ್ರ ಪ್ರತಾಪ್ ಯಾದವ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ(ಪಿಐಎಲ್)ಸಂಬಂಧಿಸಿ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.

ಅಕ್ಟೋಬರ್ 15ರಂದು ಸುಪ್ರೀಂಕೋರ್ಟ್ ಅರ್ಜಿಗಳ ಕುರಿತು ತನ್ನ ಆದೇಶಗಳನ್ನು ಕಾಯ್ದಿರಿಸಿತ್ತು. ಅಲಹಾಬಾದ್ ಹೈಕೋರ್ಟ್ ತನಿಖೆಯ ಮೇಲ್ವಿಚಾರಣೆಯನ್ನು ನಡೆಸಲು ಸೂಚಿಸಿತ್ತು.

ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಯುವತಿಯ ಮೃತದೇಹದ ಅಂತ್ಯಕ್ರಿಯೆ ರಾತ್ರೋರಾತ್ರಿ ನಡೆಸಿರುವುದರ ಬಗ್ಗೆ ದೇಶಾದ್ಯಂತ ಪ್ರತಿಭಟನೆ ನಡೆದ ಬಳಿಕ ಅಲಹಾಬಾದ್ ಉಚ್ಚ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News