ಕಾಂಗ್ರೆಸ್ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರ ಅಡ್ಡಿ, ವಾಹನಗಳಿಗೆ ತಡೆ: ಸ್ಥಳದಲ್ಲಿ ಉದ್ವಿಗ್ನ ವಾತಾವರಣ

Update: 2020-10-27 16:55 GMT

ಬೆಂಗಳೂರು, ಅ. 27: `ಏಯ್ ಮುನಿರತ್ನ ಹುಷಾರ್, ನಿಮ್ಮ ರೌಡಿತನಕ್ಕೆ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಸೋಲಿನ ಭೀತಿಯಿಂದ ನೀವು ಗೂಂಡಾಗಿರಿ ನಡೆಸುತ್ತಿದ್ದು, ಇದಕ್ಕೆ ನ.3ರ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಇಲ್ಲಿನ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ಬಿ.ಕೆ.ನಗರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದ ವೇಳೆ, ಸಿದ್ದರಾಮಯ್ಯ ಪ್ರಚಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಸಿದ್ದರಾಮಯ್ಯ, ಪೊಲೀಸರು ಮತ್ತು ಬಿಜೆಪಿ ಅಭ್ಯರ್ಥಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಏಕಾಏಕಿ ಸಿದ್ದರಾಮಯ್ಯ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದು ಅಲ್ಲದೆ, ಕಾಂಗ್ರೆಸ್ ವಾಹನಗಳು ಆ ಪ್ರದೇಶಕ್ಕೆ ತೆರಳದಂತೆ ತಡೆಯೊಡ್ಡಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ತೀವ್ರ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಈ ಹಂತದಲ್ಲಿ ಮಾತನಾಡಿದ ಸಿದ್ದರಾಮಯ್ಯ, `ಕಾಂಗ್ರೆಸ್ ಕಾರ್ಯಕರ್ತರು ಯಾರು ಇಂತಹ ಗೂಂಡಾಗಿರಿಗೆ ಹೆದರಬೇಡಿ. ನಮ್ಮ ಪ್ರಚಾರಕ್ಕೆ ಅಡ್ಡಿಪಡಿಸಿದರೆ ನಾಳೆಯಿಂದ ಬಿಜೆಪಿಯವರು ಪ್ರಚಾರ ಮತ್ತು ಮೆರವಣಿಗೆ ನಡೆಸಲು ನಾವು ಬಿಡುವುದಿಲ್ಲ' ಎಂದು ಎಚ್ಚರಿಸಿದರು.

`ಇಂತಹ ಗೊಡ್ಡು ಬೆದರಿಕೆಗಳಿಗೆ, ಗೂಂಡಾಗಿರಿ ಹೆದರುವ ಮಗ ನಾನಲ್ಲ. ಬಿಜೆಪಿಯವರ ದೌರ್ಜನ್ಯಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂದು ತಿಳಿಸಿದ ಸಿದ್ದರಾಮಯ್ಯ, `ಪೊಲೀಸರೇ ಕೂಡಲೇ ಅವರೆಲ್ಲರನ್ನೂ ಬಂಧಿಸಿ, ಇಲ್ಲವಾದರೆ ನಾವೆಲ್ಲರೂ ನಿಮ್ಮ ಪೊಲೀಸ್ ಠಾಣೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

ಸುಖಾಸುಮ್ಮನೆ ನಮ್ಮ ಪ್ರಚಾರಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಇಂತಹ ಸಾವಿರಾರು ಗಲಾಟೆಗಳನ್ನು ನಾವು ಕಂಡಿದ್ದೇವೆ. ನಾವು ಸಾಮಾನ್ಯ ಗದ್ದಲಕ್ಕೆ ಬಗ್ಗುವ ಮಕ್ಕಳೇ ಅಲ್ಲ ಎಂದು ಅಬ್ಬರಿಸಿದ ಸಿದ್ದರಾಮಯ್ಯ, ಮುನಿರತ್ನ ಸೋಲಿನ ಭಯದಿಂದ ನನ್ನ ಪ್ರಚಾರಕ್ಕೆ ಅಡ್ಡಿಪಡಿಸಲು ಜನರನ್ನು ಕಳುಹಿಸಿದ್ದಾನೆ. ನಿಮ್ಮ ಗೂಂಡಾಗಿರಿ ನಡೆಯುವುದಿಲ್ಲ. ಪ್ರಜ್ಞಾವಂತ ಮತದಾರರು ನಿಮಗೆ ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದರು.

ಪರಿಸ್ಥಿತಿಯ ಮುನ್ಸೂಚನೆಯನ್ನು ಅರಿತ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿ ಬಿಜೆಪಿ ಕಾರ್ಯಕರ್ತರ ಮೇಲೆ ಲಘುಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಆ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಚಾರ ನಡೆಸಿ ಸ್ಥಳದಿಂದ ತೆರಳಿದರು ಎಂದು ಗೊತ್ತಾಗಿದೆ. ಈ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್.ಅವರು ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News