​ಕೇರಳ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ: ಅಮಾನತುಗೊಂಡ ಐಎಎಸ್ ಅಧಿಕಾರಿ ಬಂಧನ

Update: 2020-10-29 04:01 GMT

ಕೊಚ್ಚಿನ್ : ತಿರುವನಂತಪುರ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರ ಪ್ರಧಾನ ಕಾರ್ಯದರ್ಶಿ ಶಿವಶಂಕರ್‌ನನ್ನು ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಿಂದ ನಡೆಯುತ್ತಿದ್ದ ನಾಟಕ ಕೊನೆಗೊಂಡಂತಾಗಿದೆ.

ತನಿಖೆ ನಡೆಸುತ್ತಿರುವ ಪ್ರತಿನಿಧಿಗಳು ಮತ್ತು ನಿರ್ದೇಶನಾಲಯದ ಉನ್ನತ ಅಧಿಕಾರಿಗಳು ಸಭೆ ನಡೆಸಿದ ಬಳಿಕ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಶಿವಶಂಕರ್‌ನನ್ನು ಬಂಧಿಸಲಾಗಿದೆ ಎಂದು ನಿರ್ದೇಶನಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾತ್ರಿ ಸುಮಾರು 9ರ ವೇಳೆಗೆ ನಿರ್ದೇಶನಾಲಯದ ವಿಶೇಷ ಅಭಿಯೋಜಕರನ್ನು ಕಚೇರಿಗೆ ಕರೆಸಿಕೊಳ್ಳಲಾಯಿತು. ಈ ಸಂದರ್ಭ ವಿಶೇಷ ನಿರ್ದೇಶಕ ಇ.ಡಿ. ಸುಶೀಲ್ ಕುಮಾರ್ ಕೂಡಾ ಹಾಜರಿದ್ದರು. ಆ ಬಳಿಕ ಶಿವಶಂಕರ್‌ನನ್ನು ವಿಚಾರಣೆ ನಡೆಸಲು ಆಗಮಿಸಿದ್ದ ಕಸ್ಟಮ್ಸ್ ಸಿಬ್ಬಂದಿ ಕಚೇರಿಯಿಂದ ನಿರ್ಗಮಿಸಿದರು. ರಾತ್ರಿ 10ಕ್ಕೆ ಸರಿಯಾಗಿ ಶಿವಶಂಕರ್ ಬಂಧನವನ್ನು ನಿರ್ದೇಶನಾಲಯ ದಾಖಲಿಸಿಕೊಂಡಿತು ಎಂದು ಮೂಲಗಳು ಹೇಳಿವೆ.

ಇದುವರೆಗೆ ನಡೆದ ತನಿಖೆಯಲ್ಲಿ ಹಣ ದುರ್ಬಳಕೆ ತಡೆ ಕಾಯ್ದೆಯ ಸೆಕ್ಷನ್ 19ರಡಿ ಇರುವ ಷರತ್ತುಗಳ ಅನ್ವಯ ಪುರಾವೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಶಿವಶಂಕರ್‌ನನ್ನು ಬಂಧಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಗುರುವಾರ ಮ್ಯಾಜಿಸ್ಟ್ರೇಟ್ ಅವರ ಮುಂದೆ ಐಎಎಸ್ ಅಧಿಕಾರಿಯನ್ನು ಹಾಜರುಪಡಿಸಲಾಗುವುದು. ಇದಕ್ಕೂ ಮುನ್ನ ಕಳೆದ ಮೂರು ತಿಂಗಳಲ್ಲಿ ಐದು ಬಾರಿ 36.5 ಗಂಟೆಗಳ ಕಾಲ ಕಾನೂನು ಜಾರಿ ನಿರ್ದೇಶನಾಲಯ ಶಿವಶಂಕರ್‌ನನ್ನು ವಿಚಾರಣೆಗೆ ಗುರಿಪಡಿಸಿತ್ತು.

ಬುಧವಾರ ತಿರುವನಂತಪುರದ ವಂಚಿಯೂರಿನ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ಆರೋಪಿಗೆ ವಿಚಾರಣೆ ನಡೆಸುವ ಸಲುವಾಗಿ ಸಮನ್ಸ್ ನೀಡಲಾಗಿತ್ತು. ಬಳಿಕ ಕೊಚ್ಚಿನ್ ಕರೆದೊಯ್ಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News