'​ಜಿಹಾದಿ ಭಯೋತ್ಪಾದನೆ' ಬಗ್ಗೆ ಅಂತಿಮ ಬಿಕಾಂ ಪರೀಕ್ಷೆಯಲ್ಲಿ ಪ್ರಶ್ನೆ: ಕ್ಷಮೆಯಾಚಿಸಿದ ಪುಣೆ ವಿವಿ

Update: 2020-10-29 04:32 GMT

ಪುಣೆ: ಅಂತಿಮ ಬಿಕಾಂ ಪದವಿ ಪರೀಕ್ಷೆಯಲ್ಲಿ 'ಜಿಹಾದಿ ಭಯೋತ್ಪಾದನೆ’ ಬಗ್ಗೆ ಪ್ರಶ್ನೆ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಸಾವಿತ್ರಿಭಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯ ಬಹಿರಂಗ ಕ್ಷಮೆಯಾಚಿಸಿದೆ.

ವಿಶ್ವವಿದ್ಯಾನಿಲಯ ನೀಡುವ ಐಚ್ಛಿಕ ಕೋರ್ಸ್‌ಗಳಲ್ಲೊಂದಾದ ರಕ್ಷಣಾ ಬಜೆಟಿಂಗ್ ವಿಷಯದ ಆನ್‌ಲೈನ್ ಪ್ರಶ್ನೆಪತ್ರಿಕೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿತ್ತು.

"ಜಿಹಾದಿ ಭಯೋತ್ಪಾದನೆಗೆ ಮೂಲ ಕಾರಣಗಳು" ಎಂದು ಪ್ರಶ್ನೆಯಲ್ಲಿ ಕೇಳಿ "ಜಾಗತೀಕರಣ", "ಶಸ್ತ್ರಾಸ್ತ್ರ ಪ್ರಸರಣ", "ಇಸ್ಲಾಮಿಕ್ ತೀವ್ರಗಾಮಿತ್ವದ ಹೆಸರಿನಲ್ಲಿ ಹಿಂಸೆ ಬಳಕೆ" ಎಂಬ ಮೂರು ಆಯ್ಕೆಗಳನ್ನು ನೀಡಲಾಗಿತ್ತು.

ಈ ಪ್ರಶ್ನೆ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ಸಂಕೀರ್ಣತೆಗಳನ್ನು ತಪ್ಪಿಸುವ ಸಲುವಾಗಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರು ಮಾಡಿರಬಹುದಾದ ತಪ್ಪಿಗೆ ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಕುಲಪತಿ ಡಾ.ನಿತಿನ್ ಕರ್ಮಾಲ್ಕರ್ ಹೇಳಿಕೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ವಿವರ ಕೇಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News