ಭಡ್ತಿ ವಿರುದ್ಧ ಭುಗಿಲೆದ್ದ ಆಕ್ರೋಶ: ಐಪಿಎಸ್ ಅಧಿಕಾರಿ ರಾಜೀನಾಮೆ

Update: 2020-10-29 11:55 GMT

ಬೆಂಗಳೂರು, ಅ.29: ಕೆಲ ಐಪಿಎಸ್ ಅಧಿಕಾರಿಗಳನ್ನೆ ಗುರಿಯಾಗಿಸಿಕೊಂಡು ರಾಜ್ಯ ಸರಕಾರ ಭಡ್ತಿ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ದಿಢೀರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಅರಣ್ಯ ಇಲಾಖೆಯ ಎಡಿಜಿಪಿ ಆಗಿರುವ ರವೀಂದ್ರನಾಥ್ ಅವರು ರಾಜೀನಾಮೆ ನೀಡಿದ್ದು, ಸೇವಾ ಹಿರಿತನದಲ್ಲಿ ತಮಗಿಂತ ಕಿರಿಯರಾಗಿರುವ ಟಿ.ಸುನೀಲ್ ಕುಮಾರ್ ಅವರಿಗೆ ಡಿಜಿಪಿ ಹುದ್ದೆಗೆ ಭಡ್ತಿ ನೀಡಿರುವ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.

ಎಡಿಜಿಪಿಗಳ ಸೇವಾಹಿರಿತನದ ಆಧಾರದಲ್ಲಿ ಡಿಜಿಪಿ ಹುದ್ದೆಗೆ ಭಡ್ತಿ ಪಡೆಯಲು ಅಮರ್ ಕುಮಾರ್ ಪಾಂಡೆ ಮೊದಲಿಗರಾಗಿದ್ದು ನಂತರ ರವೀಂದ್ರನಾಥ್ ಅವರಿದ್ದರು. ಆನಂತರ ಸುನೀಲ್ ಕುಮಾರ್ ಅವರಿದ್ದರಾದರೂ ರಾಜ್ಯ ಸರಕಾರ ಇಬ್ಬರು ಅಧಿಕಾರಿಗಳಿಗೆ ಡಿಜಿಪಿ ಹುದ್ದೆಗೆ ಭಡ್ತಿ ನೀಡಿ ಎಡಿಜಿಪಿ ರವೀಂದ್ರನಾಥ್ ಅವರನ್ನು ಕಡೆಗಣಿಸಿದೆ ಎನ್ನಲಾಗಿದೆ.

ಇದರಿಂದ ಅಸಮಾಧಾನಗೊಂಡು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಬುಧವಾರ ತಡರಾತ್ರಿ ರವೀಂದ್ರನಾಥ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಪ್ರವೀಣ್ ಸೂದ್ ಅವರ ಸಂಪರ್ಕ ದೊರೆಯದ ಹಿನ್ನೆಲೆ ಕಂಟ್ರೋಲ್ ರೂಮ್‍ಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಸೂದ್ ವಿರುದ್ಧ ಆಕ್ರೋಶ

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಎಡಿಜಿಪಿಗಳ ಸೇವಾ ಹಿರಿತನದಲ್ಲಿ ಭಡ್ತಿ ಕೊಡಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ.

ಸೇವಾಹಿರಿತನದಲ್ಲಿ ಸುನೀಲ್ ಕುಮಾರ್ ಅವರಿಗಿಂತ ರವೀಂದ್ರನಾಥ್ ಹಿರಿಯರಾಗಿದ್ದರೂ ಅದನ್ನು ಕಡೆಗಣಿಸಿ ಡಿಜಿಪಿ ಹುದ್ದೆಗೆ ಭಡ್ತಿ ಕೊಡಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಇನ್ನು ಎರಡು ದಿನಗಳಲ್ಲಿ ನಿವೃತ್ತರಾಗಲಿರುವ ಸುನೀಲ್ ಕುಮಾರ್ ಅವರಿಗೆ ಭಡ್ತಿ ಸಿಗಬೇಕಾಗಿರುವುದು ಸರಿಯಾಗಿದ್ದರೂ ಅವರಿಗಿಂತ ಹಿರಿಯರಾಗಿದ್ದ ರವೀಂದ್ರನಾಥ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿದ್ದರೆ ರಾಜೀನಾಮೆ ನೀಡುವ ಹಂತಕ್ಕೆ ಹೋಗುತ್ತಿರಲಿಲ್ಲ. ಆದರೆ ಸೂದ್ ಅವರು ಅದನ್ನು ಕಡೆಗಣಿಸಿದ್ದಾರೆ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News