ರಾ. ಹೆ. ಪ್ರಾಧಿಕಾರದ ಕಟ್ಟಡ ನಿರ್ಮಾಣ 12 ವರ್ಷ ವಿಳಂಬಿಸಿದ ಅಧಿಕಾರಿಗಳ ಫೋಟೋಗಳನ್ನು ಕಟ್ಟಡದಲ್ಲಿ ತೂಗು ಹಾಕಿ: ಗಡ್ಕರಿ

Update: 2020-10-29 17:44 GMT

ಹೊಸದಿಲ್ಲಿ: ಸರಕಾರಿ ಯೋಜನೆಗಳ ಜಾರಿಯಲ್ಲಾಗುವ ಅನಗತ್ಯ ವಿಳಂಬಕ್ಕೆ ಕಾರಣರಾದವರಿಗೆ ಯಾವ ಶಿಕ್ಷೆ ನೀಡಬೇಕೆಂಬುದರ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಒಂದು ಉತ್ತಮ ಸಲಹೆ ನೀಡಿದ್ದಾರೆ.

ರವಿವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಸ ಮುಖ್ಯ ಕಾರ್ಯಾಲಯ ಉದ್ಘಾಟನೆ ವೇಳೆ ನಿತಿನ್ ಗಡ್ಕರಿಯಿಂದ ಈ ಸಲಹೆ ಬಂದಿದೆ. ಈ ಕಟ್ಟಡ ನಿರ್ಮಾಣಕ್ಕೆ ಬರೋಬ್ಬರಿ 12 ವರ್ಷ ತಗಲಿದೆ ಎಂದು ನೆನಪಿಸಿದ ಗಡ್ಕರಿ 2008ರಲ್ಲಿ ಅಂತಿಮಗೊಂಡ ಈ 250 ಕೋಟಿ ರೂ. ಯೋಜನೆಗೆ 2011ರಲ್ಲಿಯೇ ಟೆಂಡರ್ ನೀಡಲಾಗಿದ್ದರೂ ಒಂಬತ್ತು ವರ್ಷಗಳ ನಂತರ ಪೂರ್ಣಗೊಂಡಿದೆ. ಇಷ್ಟೊಂದು ಸಮಯ ತಗಲಿರುವುದು ನಾಚಿಕೆಗೇಡು ಎಂದರು.

"ಈ ಕಟ್ಟಡ ನಿರ್ಮಾಣದ ಅವಧಿಯಲ್ಲಿ ಎರಡು ಸರಕಾರಗಳು, ಎಂಟು ಅಧ್ಯಕ್ಷರು ಬದಲಾಗಿದ್ದಾರೆ,'' ಎಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ  ಸಮಾರಂಭದಲ್ಲಿ ಗಡ್ಕರಿ ಹೇಳಿದರು. "ಈಗಿನ ಅಧ್ಯಕ್ಷರು ಹಾಗೂ ಸದಸ್ಯರಿಗೂ ಈ ವಿಳಂಬಕ್ಕೂ ಸಂಬಂಧವಿಲ್ಲದೇ ಇದ್ದರೂ, 2011ರಿಂದ 2020ರ ತನಕ ಈ ಕಾಮಗಾರಿಯ ನಿರ್ವಹಣೆ ಹೊತ್ತ ಮಹಾನ್ ಪುರುಷರ  ಫೋಟೋಗಳನ್ನು ಸಾಧ್ಯವಾದಲ್ಲಿ ಈ ಕಟ್ಟಡದಲ್ಲಿ ತೂಗು ಹಾಕಬೇಕು. ಅವರು ಒಂಬತ್ತು ವರ್ಷಗಳ ಕಾಲ ವಿಳಂಬಿಸಿದ್ದಾರೆ. ರೂ. 80,000 ಕೋಟಿಯಿಂದ 1 ಲಕ್ಷ ಕೋಟಿ ರೂ. ವೆಚ್ಚದ ದಿಲ್ಲಿ-ಮುಂಬೈ ಎಕ್ಸ್ ಪ್ರೆಸ್ ವೇ ಕಾಮಗಾರಿಯನ್ನು ಎರಡರಿಂದ ಮೂರು ವರ್ಷ ಅವಧಿಯಲ್ಲಿ ಪೂರ್ಣಗೊಳಿಸಿದ್ದಕ್ಕೆ ನಾವು ಹೆಮ್ಮೆ ಪಟ್ಟುಕೊಳ್ಳುತ್ತೇವೆ ಆದರೆ ರೂ. 250 ಕೋಟಿ ವೆಚ್ಚದ ಯೋಜನೆ ಪೂರ್ಣಗೊಳ್ಳಲು ಇಷ್ಟು ವರ್ಷ ತಗಲಿದೆ,'' ಎಂದು ಗಡ್ಕರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಎನ್‌ಎಚ್‌ಎಐ ಅಧಿಕಾರಶಾಹಿಯನ್ನು ‘ನಾಲಾಯಕ್,ನಿಕಮ್ಮಿ ಔರ್ ಭ್ರಷ್ಟ್ (ಅಯೋಗ್ಯ,ಅದಕ್ಷ ಮತ್ತು ಭ್ರಷ್ಟ)’ಎಂದು ಬಣ್ಣಿಸಿದ ಗಡ್ಕರಿ,ಇಂತಹ ನಕಾರಾತ್ಮಕ ಆಡಳಿತಶಾಹಿಯು ತನ್ನ ವಾರ್ಷಿಕ ಸಾಧನೆಗಳ ಮೌಲ್ಯಮಾಪನದಲ್ಲಿ ಅತ್ಯುನ್ನತ ದರ್ಜೆಗಳನ್ನು ಪಡೆದಿದ್ದಾದರೂ ಹೇಗೆ ಎಂದು ಪ್ರಶ್ನಿಸಿದರು. ತಮ್ಮ ಸಚಿವರ ಮಾತುಗಳನ್ನೇ ಕೇಳದ ಸ್ವಾರ್ಥಿ ಸರಕಾರಿ ನೌಕರರನ್ನು ತೆಗೆದುಹಾಕಲು ಇದು ಸಕಾಲವಾಗಿದೆ ಎಂದು ಅವರು ಒತ್ತಿ ಹೇಳಿದರು.

ಆದರೆ ಎನ್‌ಎಚ್‌ಎಐ ಒಂದೇ ಅದಕ್ಷ ಸಂಸ್ಥೆಯಲ್ಲ. ಪ್ರಮುಖ ಸಚಿವಾಲಯಗಳಲ್ಲಿ ಭಾರತೀಯ ಅಧಿಕಾರಶಾಹಿಯ ಅಸಮರ್ಥತೆ ಎದ್ದು ಕಾಣುತ್ತಿದೆ. ಆಂತರಿಕ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಿರಿಯ ನಾಯಕರು ಹಲವಾರು ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

 ಚೀನಾಕ್ಕೆ ಹೋಲಿಸಿದರೆ ನೆರೆಯ ದೇಶಗಳಲ್ಲಿ ಭಾರತೀಯ ರಾಜತಾಂತ್ರಿಕತೆ ವಿಫಲಗೊಂಡಿರುವುದಕ್ಕೂ ಆಡಳಿತಶಾಹಿ ಕಾರಣವಾಗಿದೆ. ವೈದ್ಯಕೀಯ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ತೆರಳುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೂಲಭೂತೀಕರಣವನ್ನು ತಡೆಯಲು ಅಗತ್ಯವಾದ ಕ್ರಮಗಳು ಅಥವಾ ವೈದ್ಯಕೀಯ ಸೀಟುಗಳಿಗಾಗಿ ಭಾರತದ ಆಪ್ತಮಿತ್ರ ಭೂತಾನ್ ಮಾಡಿಕೊಂಡಿರುವ ಕೋರಿಕೆಯನ್ನು ಈಡೇರಿಸಲು ಅಥವಾ ನೆರೆರಾಷ್ಟ್ರಗಳ ಆಹಾರಧಾನ್ಯಗಳ ಅಗತ್ಯವನ್ನು ಪೂರೈಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಅಧಿಕಾರಿಗಳು ತಿಂಗಳುಗಟ್ಟಲೆ ಸಮಯವನ್ನು ಒಣಚರ್ಚೆಗಳಲ್ಲಿಯೇ ಕಳೆದಿರುವುದು ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.

ಅತ್ಯುನ್ನತ ಮಟ್ಟಗಳಿಂದ ಹಸಿರು ನಿಶಾನೆ ಲಭಿಸಿದ್ದರೂ ಅಧಿಕಾರಶಾಹಿಯು ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದೆ ಮತ್ತು ಕಡತಗಳು ಒಂದು ಸಚಿವಾಲಯದಿಂದ ಇನ್ನೊಂದು ಸಚಿವಾಲಯವನ್ನು ಸುತ್ತುತ್ತಲೇ ಇರುತ್ತವೆ. ಈರುಳ್ಳಿ ಅಥವಾ ಆಹಾರ ಧಾನ್ಯಗಳ ರಫ್ತಿನಂತಹ ಸಣ್ಣಪುಟ್ಟ ಸಮಸ್ಯೆಗಳಿಗೂ ತಾವು ಚೀನಾದತ್ತ ಮುಖ ಮಾಡಿದರೆ ಅದಕ್ಕಾಗಿ ತಮ್ಮನ್ನು ದೂರಬಾರದು ಎಂದು ನೆರೆಹೊರೆಯ ದೇಶಗಳು ಆಗಾಗ್ಗೆ ಭಾರತ ಸರಕಾರಕ್ಕೆ ತಿಳಿಸಿರುವುದರಲ್ಲಿ ಅಚ್ಚರಿಯೇನಿಲ್ಲ. ಸೂಕ್ಷ್ಮ ವಿಷಯಗಳಲ್ಲಿ ನಿಲುವು ಮತ್ತು ನಿರ್ಧಾರಗಳನ್ನು ತಳೆಯಲು ಇಡೀ ವಿಶ್ವವೇ ಭಾರತದತ್ತ ನೋಡುತ್ತಿರುವ ಈ ಸಮಯದಲ್ಲಿ ಉದಯೋನ್ಮುಖ ಶಕ್ತಿಯಾಗಿರುವ ಈ ದೇಶಕ್ಕೆ ಇಂತಹ ಭಾವನೆಗಳು ತೀವ್ರ ಹಾನಿಯನ್ನುಂಟು ಮಾಡುತ್ತವೆ.

ಗಡ್ಕರಿಯವರು ಆಡಳಿತಶಾಹಿಯನ್ನು ‘ನಾಲಾಯಕ್’ ಎಂದು ಕರೆದಿರುವುದಕ್ಕೆ ಇನ್ನೊಂದು ಸಮರ್ಥನೆ ದ್ವಾರಕಾದಲ್ಲಿರುವ ಸಲರಿಯಾ ಆಫೀಸರ್ಸ್ ಎನ್‌ಕ್ಲೇವ್ ಆಗಿದೆ. 2010ರಲ್ಲಿ ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್‌ನಿಂದ ನಿರ್ಮಾಣಗೊಂಡಿದ್ದ ಇದನ್ನು ಕಳಪೆ ಕಾಮಗಾರಿಯಿಂದಾಗಿ ಈಗ ನೆಲಸಮಗೊಳಿಸುವುದು ಅನಿವಾರ್ಯವಾಗಿದೆ. ಈ ಎನ್‌ಕ್ಲೇವ್‌ನಲ್ಲಿ ವಾಸವಿರುವ ಭಾರತೀಯ ಸೇನೆಯ ಅಧಿಕಾರಿಗಳು ಕೆಲವು ಚಿತ್ರಗಳನ್ನು ಸೇನೆಯ ಮುಖ್ಯ ಕಚೇರಿಗೆ ಕಳುಹಿಸಿದ್ದು,ಇಲ್ಲಿಯ ಫ್ಲ್ಯಾಟ್‌ಗಳು ಸಿರಿಯಾದಲ್ಲಿ ಬಾಂಬ್‌ದಾಳಿಗಳಿಗೆ ಗುರಿಯಾದ ಮನೆಗಳಂತೆ ಕಂಡುಬರುತ್ತಿವೆ ಎಂದಿವೆ ವರದಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News