ರಾಜ್ಯೋತ್ಸವ ಪ್ರಶಸ್ತಿ: ಸಾಧಕರ ಜೊತೆಗೆ ಸಮಯ ಸಾಧಕರು

Update: 2020-10-30 05:52 GMT

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ನಾಡು ನುಡಿಗಳನ್ನು ಕಟ್ಟಲು ಶ್ರಮಿಸಿದ ಗಣ್ಯರನ್ನು ಗುರುತಿಸುವ ಭಾಗವಾಗಿ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಸರಕಾರ ನೀಡುತ್ತಾ ಬರುತ್ತಿದೆ. ಇದು ಹಲವು ಕಾರಣಗಳಿಗಾಗಿ ಉಳಿದೆಲ್ಲ ಪ್ರಶಸ್ತಿಗಳಿಗಿಂತ ಭಿನ್ನವಾದುದು. ಮುಖ್ಯವಾಗಿ, ಈ ಪ್ರಶಸ್ತಿ ಕೇವಲ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಸಾಧಕರನ್ನು ಗುರುತಿಸಿ ನೀಡುವ ಪ್ರಶಸ್ತಿಯಲ್ಲ. ಶಿಕ್ಷಣ, ಕೈಗಾರಿಕೆ, ಸೇವೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಜಾನಪದ, ಕೃಷಿ, ಪರಿಸರ..ಹೀಗೆ ಈ ನಾಡನ್ನು ಕಟ್ಟಲು ಕೈ ಜೋಡಿಸಿದ ಹಲವು ಕ್ಷೇತ್ರಗಳ ಸಾಧಕರನ್ನು ಈ ಪ್ರಶಸ್ತಿಯ ಮೂಲಕ ಗುರುತಿಸಲಾಗುತ್ತದೆ. ರಾಜ್ಯದ ಎಲ್ಲ ಭಾಗಗಳಲ್ಲಿರುವ ಸಾಧಕರನ್ನು ಪ್ರಾತಿನಿಧಿಕವಾಗಿ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಸಾಹಿತಿಗಳು, ಚಿಂತಕರು, ಸಾಧಕರನ್ನೊಳಗೊಂಡ ಸಮಿತಿಯೂ ಇರುತ್ತದೆ. ಆದರೆ ಯಾವಾಗ ಈ ಸಮಿತಿಯ ನಿಯಂತ್ರಣ ರಾಜಕಾರಣಿಗಳ ಕೈಗೆ ಹೋಯಿತೋ ಅಲ್ಲಿಂದ ಈ ಪ್ರಶಸ್ತಿಯೆನ್ನುವುದು ರಾಜಕೀಯ ಕಾರ್ಯಕರ್ತರ ಸಾಧನೆಗಳಿಗೆ ಸಿಗುವ ಪ್ರಶಸ್ತಿಯಾಗಿ ಪರಿವರ್ತನೆಯಾಯಿತು. ರಾಜಕಾರಣಿಗಳ ಶಿಫಾರಸು ಇದ್ದವರಿಗಷ್ಟೇ ಪ್ರಶಸ್ತಿ ಎನ್ನುವಂತಾಯಿತು. ಪ್ರಶಸ್ತಿ ವಿಜೇತರ ಸಂಖ್ಯೆ ನೂರಾ ಐವತ್ತು ದಾಟಿತು. ಅಷ್ಟೇ ಅಲ್ಲ, ಎರಡೆರಡು ಬಾರಿ ಪ್ರಶಸ್ತಿ ವಿಜೇತರ ಪಟ್ಟಿಗಳನ್ನು ಘೋಷಿಸುವ ಸ್ಥಿತಿ ನಿರ್ಮಾಣವಾಯಿತು. ನಿಜವಾದ ಸಾಧಕರು ‘ಎಲ್ಲಿ ನಮಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿ ಅವಮಾನಿಸಿ ಬಿಡುತ್ತಾರೋ’ ಎಂದು ಹೆದರುವಷ್ಟರ ಮಟ್ಟಿಗೆ ಈ ಪ್ರಶಸ್ತಿಯ ಘನತೆಯನ್ನು ರಾಜಕಾರಣಿಗಳು ಕುಗ್ಗಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ‘ರಾಜಕೀಯಗೊಳಿಸುವುದರ ಬಗ್ಗೆ’ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಯಿತು. ಮುಖ್ಯವಾಗಿ 60 ಸಾಧಕರಿಗಿಂತ ಅಧಿಕ ಮಂದಿಗೆ ಪ್ರಶಸ್ತಿ ನೀಡಬಾರದು ಎನ್ನುವ ನಿಯಮವನ್ನು ತರಲಾಯಿತು. ಜೊತೆಗೆ ಪ್ರಶಸ್ತಿ ವಿಜೇತರಿಗೆ ಕನಿಷ್ಠ 60 ವರ್ಷ ದಾಟಿರಬೇಕು ಎಂಬ ನಿಬಂಧನೆಗಳನ್ನು ಹಾಕಲಾಯಿತು. ಇದರಿಂದಾಗಿ ಹಿರಿಯರನ್ನು ಬದಿಗೆ ಸರಿಸಿ, ಕಿರಿಯರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವುದಕ್ಕೆ ಕಡಿವಾಣ ಬಿತ್ತು. ಈ ಕ್ರಮದಿಂದಾಗಿ ಗ್ರಾಮೀಣ ಮಟ್ಟದಲ್ಲಿರುವ ಸಾಧಕರಿಗೂ ಪ್ರಶಸ್ತಿಗಳು ಸಲ್ಲುವಂತಾಯಿತು. ಎಲೆಮರೆಯಲ್ಲಿರುವ ಹಲವು ಸಾಧಕರು ಗುರುತಿಸಲ್ಪಡ ತೊಡಗಿದರು. ಇದೇ ಸಂದರ್ಭದಲ್ಲಿ ಪ್ರಶಸ್ತಿಯ ಗೌರವಧನವನ್ನು ಹೆಚ್ಚಿಸಲಾಯಿತು. ಕಳೆದ ಹತ್ತು ವರ್ಷಗಳ ಈಚೆಗೆ ಅರ್ಹರಿಗೆ ಪ್ರಶಸ್ತಿ ದೊರಕುತ್ತಿರುವುದರ ಪರಿಣಾಮ, ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯ ಕುರಿತಂತೆ ಜನರು ಆಸಕ್ತಿ ತೋರುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯ ಕುರಿತಂತೆಯೂ ಜನರಲ್ಲಿ ಕುತೂಹಲವಿತ್ತು. ಈ ಸಾಲಿನಲ್ಲಿ ಹಲವು ಪ್ರಮುಖ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಂತೋಷದ ವಿಷಯವೇ ಸರಿ. ಹಲವು ಕಲಾವಿದರು, ಸಾಹಿತಿಗಳು, ಸಾಧಕರು ರಾಜ್ಯೋತ್ಸವದ ಮಾನ್ಯತೆಯನ್ನು ಪಡೆದುಕೊಂಡಿದ್ದಾರೆ.

ನಾಡು ನುಡಿಗಳಿಗೆ ಇವರು ಕೊಟ್ಟಿರುವ ಕೊಡುಗೆಗಳಿಗೆ ನಾವು ತಲೆಬಾಗಲೇ ಬೇಕಾಗಿದೆ. ಆದರೂ, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯ ಸಂದರ್ಭದಲ್ಲಿ ಆರೆಸ್ಸೆಸ್ ಮೂಗು ತೂರಿಸಿದೆ ಎನ್ನುವ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ಮುಖ್ಯವಾಗಿ, ಆರೆಸ್ಸೆಸ್ ಹಿನ್ನೆಲೆಯಿರುವ ಸಂಘಟನೆ, ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿರುವ ಕುರಿತಂತೆ ಆಕ್ಷೇಪಗಳು ಕೇಳಿ ಬಂದಿವೆ. ಸಚಿವ ಸಿ.ಟಿ.ರವಿಯವರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಸಮರ್ಥಿಸಿಕೊಂಡಿದ್ದಾರೆ. ‘‘ಆರೆಸ್ಸೆಸ್ ಸೇರಿದಂತೆ ಯಾವ ಸಂಘಟನೆ, ಸಂಸ್ಥೆಗಳಿಗೂ ಪ್ರಶಸ್ತಿ ನೀಡಬಾರದು ಎಂಬ ನಿಯಮಗಳಿಲ್ಲ. ಆರೆಸ್ಸೆಸ್ ಕೂಡ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ’’ ಎಂದು ಸಚಿವ ರವಿ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಹಲವು ಜಾತಿ ಮತ್ತು ಧರ್ಮಗಳ ಸಂಘಟನೆಗಳು ಸೇವೆಯನ್ನು ಪ್ರಮುಖ ವೌಲ್ಯವಾಗಿ ಸ್ವೀಕರಿಸಿ ಕೆಲಸ ಮಾಡುತ್ತಿರುವುದು ನಿಜ. ಇಂತಹ ಸಂಘಟನೆಗಳು ನಾಡಿನ ಒಳಿತಿಗಾಗಿ ಕೊಡುಗೆಗಳನ್ನು ನೀಡಿದ್ದರೆ ಅದನ್ನು ಪ್ರಾಮಾಣಿಕವಾಗಿ ಗುರುತಿಸಿ ಗೌರವಿಸುವುದರಲ್ಲಿ ತಪ್ಪೇನು ಇಲ್ಲ. ಆದರೆ ಆರೆಸ್ಸೆಸ್ ಅಪ್ಪಟ ರಾಜಕೀಯ ಸಂಘಟನೆ. ಅದು ಸೇವೆಗಳಿಗಿಂತ, ತನ್ನ ಅಪರಾಧ ಚಟುವಟಿಕೆಗಳಿಗಾಗಿ ಕುಖ್ಯಾತಿಯನ್ನು ಪಡೆದಿದೆ. ಆರೆಸ್ಸೆಸ್‌ನಲ್ಲಿರುವ ಹಲವು ನಾಯಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಇಂತಹ ಸಂಘಟನೆಯ ಜೊತೆಗೆ ರಾಜ್ಯೋತ್ಸವವನ್ನು ತಳಕು ಹಾಕುವುದು ಕನ್ನಡಕ್ಕೆ ಎಸಗುವ ದ್ರೋಹವಾಗಿದೆ. ಆರೆಸ್ಸೆಸ್ ಸಂಘಟನೆ ಕನ್ನಡಕ್ಕಾಗಿ ಯಾವುದೇ ಕೆಲಸವನ್ನು ಈವರೆಗೆ ಮಾಡಿಲ್ಲ. ಮಾತ್ರವಲ್ಲ, ಅದು ಕನ್ನಡದ ಬದಲಿಗೆ ಹಿಂದಿ ಮತ್ತು ಸಂಸ್ಕೃತವನ್ನು ಹೇರಲು ಕೇಂದ್ರ ಸರಕಾರದ ಜೊತೆಗೆ ಪರೋಕ್ಷವಾಗಿ ಕೈಜೋಡಿಸಿದೆ. ಕನ್ನಡದ ಚಟುವಟಿಕೆಗಳಿಗಾಗಿ ದುಡಿದ ಇತಿಹಾಸವೇ ಆರೆಸ್ಸೆಸ್‌ಗಿಲ್ಲ. ಬದಲಿಗೆ, ಕನ್ನಡದ ಸೌರ್ಹಾದ ಪರಂಪರೆಗೆ ಧಕ್ಕೆ ತಂದ ಆರೋಪ, ಕಳಂಕ ಅದರ ಮೇಲಿದೆ. ಇಂತಹ ಕನ್ನಡ ದ್ರೋಹಿ ಸಂಘಟನೆಯ ಜೊತೆಗೆ ಕೈಜೋಡಿಸಿರುವ ಯಾವುದೇ ಸಂಘಟನೆಗಳಿಗೆ ಪ್ರಶಸ್ತಿಯನ್ನು ನೀಡುವುದು ಕನ್ನಡಕ್ಕೆ ಎಸಗುವ ದ್ರೋಹವಾಗಿದೆ. ವಿಪರ್ಯಾಸವೆಂದರೆ ಕಳೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಮೋದಿಯವರ ಪರವಾಗಿ ಚುನಾವಣಾ ಪ್ರಚಾರ ಮಾಡುವುದಕ್ಕೆಂದೇ ಕಟ್ಟಲ್ಪಟ್ಟ ಪಕ್ಕಾ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನೊಳಗೊಂಡ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದ ‘ನಮೋ ಯುವ ಬ್ರಿಗೇಡ್’ ಯಾನೆ ‘ಯುವ ಬ್ರಿಗೇಡ್’ಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಈ ರಾಜ್ಯದಲ್ಲಿ ಎರಡು ಮೂರು ದಶಕಗಳಿಂದ ನಾಡಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಹಲವು ಸಂಘಟನೆಗಳಿದ್ದರೂ, ಕಳೆದ ನಾಲ್ಕು ವರ್ಷದಿಂದ ಸಕ್ರಿಯವಾಗಿರುವ ಈ ‘ಬ್ರಿಗೇಡ್’ಗೆ ಪ್ರಶಸ್ತಿಯನ್ನು ನೀಡುವ ಮೂಲಕ, ರಾಜ್ಯೋತ್ಸವ ಪ್ರಶಸ್ತಿಯ ಘನತೆಗೆ ಕುಂದು ತರಲಾಗಿದೆ.

ಈ ಬ್ರಿಗೇಡ್‌ನ ಮುಖ್ಯಸ್ಥರ ಮೇಲೆ ಹತ್ತು ಹಲವು ಅವ್ಯವಹಾರಗಳ ಆರೋಪಗಳಿವೆ. ನದಿ ಶುದ್ಧೀಕರಣದ ಹೆಸರಿನಲ್ಲಿ ವಿವಿಧ ಸಂಘಟನೆಗಳಿಂದ ದೇಣಿಗೆಗಳನ್ನು ಪಡೆದು ಅವ್ಯವಹಾರ ನಡೆಸಿರುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿ ಬಂದಿವೆ. ಕೊಲೆ ಆರೋಪಿಯೊಂದಿಗೆ ಇವರಿಗೆ ಇರುವ ನಂಟು ಚರ್ಚೆಗೆ ಕಾರಣವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಮೋದಿಯ ಪರ ಚುನಾವಣಾ ಪ್ರಚಾರದಲ್ಲಿ ಈತ ಮಾಡಿದ ಸುಳ್ಳು ಭಾಷಣಗಳು ವೈರಲ್ ರೂಪದಲ್ಲಿ ಹರಿದಾಡುತ್ತಿವೆ. ಸಾರ್ವಜನಿಕವಾಗಿ ತನ್ನ ಸುಳ್ಳುಗಳ ಮೂಲಕ ಹಾಸ್ಯಾಸ್ಪದವಾಗಿರುವ ಈ ಮನುಷ್ಯನಿಗೆ ಕನ್ನಡದ ಜೊತೆಗಿರುವ ನಂಟಾದರೂ ಏನು? ಎನ್ನುವ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ತನ್ನ ರಾಜಕೀಯ ಉದ್ದೇಶಕ್ಕಾಗಿ ಯುವಕರನ್ನು ದಾರಿ ತಪ್ಪಿಸುತ್ತಿರುವ ಇವರು, ಹಿಂದಿ ಹೇರಿಕೆಯನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಾ ಬಂದವರು. ತನ್ನ ಸುಳ್ಳುಬುರುಕ ಭಾಷಣವನ್ನೇ ಬಂಡವಾಳ ಮಾಡಿಕೊಂಡು ಬದುಕುತ್ತಾ ಬಂದಿರುವ ಇವರನ್ನು ಸಾಧಕ ಎಂದು ಕರೆಯುವುದಕ್ಕಿಂತ ಸಮಯಸಾಧಕ ಎಂದು ಕರೆಯುತ್ತಿರುವವರ ಸಂಖ್ಯೆ ಅಧಿಕವಿದೆ. ಇವರ ಸಂಘಟನೆಗೆ ಪ್ರಶಸ್ತಿಯನ್ನು ನೀಡುವ ಮೂಲಕ, ರಾಜ್ಯೋತ್ಸವಕ್ಕೆ ಆಯ್ಕೆಯಾಗಿರುವ ಉಳಿದ ಸಾಧಕರನ್ನು ಸರಕಾರ ಅವಮಾನಿಸಿದೆ. ಆದುದರಿಂದ, ರಾಜ್ಯೋತ್ಸವ ಪ್ರಶಸ್ತಿ ಪಡೆದ ಉಳಿದ ಗಣ್ಯರ ಹಿರಿಮೆಯನ್ನು ಕಾಪಾಡುವ ನಿಟ್ಟಿನಲ್ಲಾದರೂ, ‘ಯುವ ಬ್ರಿಗೇಡ್’ಗೆ ನೀಡಿರುವ ಪ್ರಶಸ್ತಿಯನ್ನು ಹಿಂದೆಗೆದುಕೊಂಡು ಕನ್ನಡದ ಘನತೆಯನ್ನು ಕಾಪಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News