ರಾಜಧಾನಿ ದಿಲ್ಲಿಯಲ್ಲೀಗ ಮೈ ಕೊರೆಯುವ ಚಳಿ

Update: 2020-10-30 03:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ.30: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಕಳೆದ 26 ವರ್ಷಗಳಲ್ಲೇ ಅಕ್ಟೋಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶ ಇದಾಗಿದೆ. ತೆಳು ಮೋಡ ಮುಸುಕಿರುವುದು ಮತ್ತು ಗಾಳಿಯ ವೇಗ ಕಡಿಮೆಯಾಗಿರುವುದೂ ಸೇರಿದಂತೆ ಇತರ ಹವಾಮಾನ ಸ್ಥಿತಿಯಿಂದಾಗಿ ಉಷ್ಣಾಂಶ ಗಣನೀಯವಾಗಿ ಇಳಿದಿದೆ ಎಂದು ಭಾರತದ ಹವಾಮಾನ ಇಲಾಖೆ ವಿಜ್ಞಾನಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ದಿಲ್ಲಿಯಲ್ಲಿ ಈ ವೇಳೆಗೆ 15-16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ ಎಂದು ಐಎಂಡಿ ಮೂಲಗಳು ಹೇಳಿವೆ. ಈ ಹಿಂದೆ ದಿಲ್ಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶ 12.3 ಡಿಗ್ರಿ ಸೆಲ್ಸಿಯಸ್. 1994ರ ಅಕ್ಟೋಬರ್ 31ರಂದು ಈ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. 1937ರ ಅಕ್ಟೋಬರ್ 31ರಂದು ದಾಖಲಾದ 9.4 ಡಿಗ್ರಿ ಸೆಲ್ಸಿಯಸ್ ಇದುವರೆಗೆ ಅಕ್ಟೋಬರ್‌ನಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶವಾಗಿದೆ. ಮೋಡ ಇಲ್ಲದಿರುವುದು ತಾಪಮಾನ ಈ ಬಾರಿ ಇಳಿಯಲು ಪ್ರಮುಖ ಕಾರಣ ಎಂದು ಐಎಂಡಿ ವಿಜ್ಞಾನಿ ವಿವರಿಸಿದ್ದಾರೆ.

"ಸಾಮಾನ್ಯಕ್ಕಿಂತ ಕನಿಷ್ಠ ಮಟ್ಟಕ್ಕೆ ತಾಪಮಾನ ಇಳಿಯಲು ಪ್ರಮುಖ ಕಾರಣವೆಂದರೆ ನಿರೀಕ್ಷಿಸಿದಷ್ಟು ಮೋಡ ಇಲ್ಲ. ಇದರಿಂದಾಗಿ ಮೇಲ್ಮೈ ಕ್ಷಿಪ್ರವಾಗಿ ತಣ್ಣಗಾಗುತ್ತಿದೆ. ಮುಂದಿನ ಎರಡು- ಮೂರು ದಿನಗಳಲ್ಲಿ ಉಷ್ಣತೆ 12 ಡಿಗ್ರಿಯ ಆಸುಪಾಸು ಇರಲಿದೆ" ಎಂದು ವಿಜ್ಞಾನಿ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.

ಉಷ್ಣಾಂಶ ಕುಸಿತಕ್ಕೆ ಇನ್ನೊಂದು ಸಂಭಾವ್ಯ ಕಾರಣ ಗಾಳಿಯ ವೇಗ ಕಡಿಮೆಯಾಗಿರುವುದು. ಇದರಿಂದಾಗಿ ಮಂಜು ಮುಸುಕುತ್ತಿದೆ ಎಂದು ವಿವರಿಸಿದ್ದಾರೆ.
ನವೆಂಬರ್ 1ರಂದು ದಿಲ್ಲಿಯ ಉಷ್ಣಾಂಶ 11 ಡಿಗ್ರಿಗೆ ಕುಸಿಯುವ ಸಾಧ್ಯತೆ ಇದೆ ಐಎಂಡಿ ವಿಜ್ಞಾನಿಗಳು ಹೇಳಿದ್ದಾರೆ. ಕಡಿಮೆ ಉಷ್ಣಾಂಶ ಮತ್ತು ಕಡಿಮೆ ಗಾಳಿಯ ವೇಗ ನಗರದಲ್ಲಿ ವಾಯುಮಾಲಿನ್ಯ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News