ಉಪನಗರ ರೈಲು ಯೋಜನೆಗೆ ಸಾಲ ಪಡೆಯಲು ಸರಕಾರ ಒಪ್ಪಿಗೆ

Update: 2020-10-30 14:21 GMT

ಬೆಂಗಳೂರು, ಅ.30: ಬೆಂಗಳೂರು ಉಪನಗರ ರೈಲು ಯೋಜನೆಯ ಒಟ್ಟು ಮೊತ್ತ 15,767 ಕೋಟಿ ರೂ. ಈ ಪೈಕಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಲಾ 20ರಷ್ಟು ಹಣವನ್ನು ಭರಿಸಲಿದೆ. ಉಳಿದ ಶೇ.60 ರಷ್ಟು ಹಣವನ್ನು ಸಾಲದ ಮೂಲಕ ಪಡೆಯಲು ಸರಕಾರ ಒಪ್ಪಿಗೆ ನೀಡಿದೆ. ಇದರಿಂದ ಸಾಲದ ಹಣವನ್ನು ಜಾಗತಿಕ ಬ್ಯಾಂಕ್‍ಗಳಾದ ಏಷ್ಯನ್ ಅಭಿವೃದ್ಧಿ ಬ್ಯಾಂಕ್(ಎಡಿಬಿ), ಜಪಾನ್ ಅಂತಾರಾಷ್ಟ್ರೀಯ ಸಹಕಾರ ಬ್ಯಾಂಕ್(ಜೈಕಾ) ಮೊರೆ ಹೋಗುವುದು ಅನಿವಾರ್ಯವಾಗಿದೆ.

ಸಾಲ ಎತ್ತುವಳಿ ಮೂಲಕ 7,438 ಕೋಟಿ ರೂ. ಸಂಗ್ರಹಿಸುವುದು ಸಾಹಸದ ಕೆಲಸವಾಗಿದ್ದು, ಯಾವ ವರ್ಷದಲ್ಲಿ ಎಷ್ಟು ಹಣ ಬೇಕಾಗುತ್ತದೆ ಎಂಬ ಲೆಕ್ಕಾಚಾರ ಮಾಡಿದ ನಂತರ ಸಾಲವನ್ನು ಪಡೆಯುವ ಚಿಂತನೆಯಲ್ಲಿದೆ ಕೆ-ರೈಡ್. 2021-22 ಸಾಲಿನ ಬಜೆಟ್ ಮಂಡನೆಯಾದ ಬಳಿಕ ಕಾಮಗಾರಿ ಶುರುವಾಗುವ ಸಾಧ್ಯತೆ ಇದೆ.

ಏರ್ ಪೋರ್ಟ್ ಮಾರ್ಗಕ್ಕೆ ಆದ್ಯತೆ: ಯೋಜನೆಯು ನಾಲ್ಕು ಕಾರಿಡಾರ್‍ಗಳನ್ನು ಹೊಂದಿದೆ. ಈ ಪೈಕಿ ಬೆಂಗಳೂರು ಸಿಟಿ-ದೇವನಹಳ್ಳಿ ಕಾರಿಡಾರ್ 41.40 ಕಿ.ಮೀ. ಉದ್ದವಿರಲಿದೆ. ಈ ಮಾರ್ಗ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಹಾದು ಹೋಗಲಿದೆ. ಇಲ್ಲಿಂದ ಕೆಐಎ ಸಮೀಪವಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕ್ಕಾಗಿ ಈ ಕಾರಿಡಾರನ್ನೇ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುತ್ತದೆ.

ಸದ್ಯ ನಗರದಿಂದ ಕೆಐಎ ತಲುಪಲು ತ್ರಾಸ ಪಡಬೇಕಿದ್ದು, ನಾಗರಿಕರಿಗೆ ಹೋಗಿ ಬರಲು ಸಮಯ, ಹಣ ಹೆಚ್ಚು ವ್ಯಯವಾಗುತ್ತಿದೆ. ಜತೆಗೆ ಏರ್ ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದಾಗಿ ವಿಮಾನ ಹಿಡಿಯಲು ಕಸರತ್ತು ಮಾಡಬೇಕಿದೆ. ಈ ಸಮಸ್ಯೆಗೆ ಪರಿಹಾರ ನೀಡುವ ಜತೆಗೆ ಉಪನಗರ ರೈಲಿಗೆ ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ಸೆಳೆಯಲು ಈ ಮಾರ್ಗದಲ್ಲಿ ಮೊದಲು ಕಾಮಗಾರಿ ಆರಂಭಿಸಲಾಗುತ್ತದೆ.

ಕಾಮಗಾರಿಗೆ ವರ್ಷಾಂತ್ಯದೊಳಗೆ ಟೆಂಡರ್ ಆಹ್ವಾನಿಸುವ ಸಾಧ್ಯತೆ ಇದೆ ಎಂದು ಕೆ-ರೈಡ್ ಸಂಸ್ಥೆಯ ಮೂಲಗಳು ತಿಳಿಸಿವೆ. ಇಡೀ ಯೋಜನೆ ಆರು ವರ್ಷದಲ್ಲಿ ಪೂರ್ಣಗೊಳಿಸಲು ಗುರಿ ಹೊಂದಿದ್ದು, ಮೂರು ವರ್ಷದ ಅವಧಿಯೊಳಗೆ ಏರ್ ಪೋರ್ಟ್ ಮಾರ್ಗವನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡುವ ಆಲೋಚನೆ ಇದೆ.

ಏಕಕಾಲಕ್ಕೆ ಸಾಲ ದೊರೆತು ಭೂಸ್ವಾಧೀನ, ಪರಿಹಾರ ಬಿಡುಗಡೆ, ಸಂಪನ್ಮೂಲ ಕ್ರೋಡೀಕರಣ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡಲ್ಲಿ ಗಡುವಿನೊಳಗೆ ರೈಲು ಓಡಬಹುದು. ಇದಕ್ಕಾಗಿ ಸರಕಾರದ ಇಚ್ಛಾಶಕ್ತಿ ಮುಖ್ಯ. ಭವಿಷ್ಯದಲ್ಲಿ ಸಾರ್ವಜನಿಕ ಸಾರಿಗೆ ಮುನ್ನೆಲೆಗೆ ಬರುವ ಕಾರಣ ಜನರಿಗೂ ಕೂಡ ರೈಲು ಸೌಲಭ್ಯವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಲಿದೆ. ಹೀಗಾಗಿ ಉಪನಗರ ರೈಲು ಯೋಜನೆಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕು ಎಂದು ನಗರ ತಜ್ಞರು ದನಿಗೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News