ಟರ್ಕಿ, ಗ್ರೀಸ್‌ನಲ್ಲಿ ಭಾರೀ ಭೂಕಂಪದಿಂದ ಕನಿಷ್ಠ 22 ಬಲಿ

Update: 2020-10-31 03:56 GMT

ಹೊಸದಿಲ್ಲಿ : ಟರ್ಕಿ ಮತ್ತು ಗ್ರೀಸ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಬಲ ಭೂಕಂಪದ ಬಳಿಕ 196 ಬಾರಿ ಲಘು ಕಂಪನ ಸಂಭವಿಸಿದ್ದು, 23 ಬಾರಿ ಈ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0ಕ್ಕಿಂತ ಅಧಿಕ ಇತ್ತು ಎಂದು ಎಎನ್‌ಐ ವರದಿ ಮಾಡಿದೆ.

ಅಮೆರಿಕದ ಜಿಯಲಾಜಿಕಲ್ ಸರ್ವೆ ಅಧಿಕಾರಿಗಳ ಪ್ರಕಾರ, ದೊಡ್ಡ ಭೂಕಂಪ ಗ್ರೀಕ್‌ನ ಕರ್ಲೊವಸಿ ಪಟ್ಟಣದ 11 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ. ಟರ್ಕಿಯ ಇಝ್ಮೀರ್‌ನಲ್ಲಿ ವ್ಯಾಪಕ ಹಾನಿಯಾಗಿದ್ದು, ಶೋಧ ಮತ್ತು ಪರಿಹಾರ ಕಾರ್ಯಗಳು ಪ್ರಗತಿಯಲ್ಲಿದೆ.

ಟರ್ಕಿಯ ಪಶ್ಚಿಮ ಇಝ್ಮೀರ್ ಪ್ರಾಂತ್ಯ ಮತ್ತು ಗ್ರೀಕ್ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಅಪಾರ ಜೀವಹಾನಿ ಮತ್ತು ಆಸ್ತಿಪಾಸ್ತಿಗೆ ನಷ್ಟ ಸಂಭವಿಸಿದೆ. ಭೂಕಂಪದ ಪರಿಣಾಮವಾಗಿ ಇಝ್ಮೀರ್ ಪ್ರಾಂತ್ಯದ ಸೆಫೆರಿಹಿಸಾರ್ ಜಿಲ್ಲೆಯಲ್ಲಿ ಸಣ್ಣ ಸುನಾಮಿ ಅಲೆ ಅಪ್ಪಳಿಸಿದ್ದು, ಈ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿ ಸತ್ತಿರುವುದಾಗಿ ಟರ್ಕಿಯ ವಿಕೋಪ ಮತ್ತು ತುರ್ತು ನಿರ್ವಹಣೆ ಘಟಕ ಪ್ರಕಟಿಸಿದೆ.

ಗ್ರೀಸ್ ಮತ್ತು ಟರ್ಕಿಯ ಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ಡಬ್ಲ್ಯುಎಚ್‌ಓ ಮಹಾನಿರ್ದೇಶಕ ಟೆಡ್ರೋಸ್ ಅಧೊಮ್ ಘೇಬ್ರಿಯಾಸಿಸ್ ಹೇಳಿದ್ದಾರೆ. ಅಗತ್ಯವಿರುವ ನಾಗರಿಕರಿಗೆ ತುರ್ತು ವೈದ್ಯಕೀಯ ಸೇವೆಯನ್ನು ಎರಡೂ ದೇಶಗಳಲ್ಲಿ ಖಾತರಿಪಡಿಸುವ ಸಲುವಾಗಿ ಉಭಯ ದೇಶಗಳ ಜತೆ ನಾವು ಕಾರ್ಯ ನಿರ್ವಹಿಸಲಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News