ಕೇವಲ ವಿವಾಹದ ಉದ್ದೇಶದ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್

Update: 2020-10-31 06:27 GMT

ಲಕ್ನೋ: ಕೇವಲ ವಿವಾಹದ ಉದ್ದೇಶದಿಂದ ನಡೆಯುವ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ವಿವಾಹವಾದ ಮೂರು ತಿಂಗಳ ನಂತರ  ತಮಗೆ ರಕ್ಷಣೆ ಕೋರಿ ದಂಪತಿಯೊಂದು ಸಲ್ಲಿಸಿದ್ದ ಅಪೀಲಿನ ಕುರಿತಂತೆ ಹಸ್ತಕ್ಷೇಪ ನಡೆಸಲು ನಿರಾಕರಿಸಿದ ಹೈಕೋರ್ಟ್ ತನ್ನ ಈ ಹಿಂದಿನ ಆದೇಶವೊಂದನ್ನೂ ಉಲ್ಲೇಖಿಸಿದೆ. ಅಪೀಲು ಸಲ್ಲಿಸಿದ್ದ ಮಹಿಳೆ ಮೂಲತಃ ಮುಸ್ಲಿಂ ಆಗಿದ್ದರೂ  ಹಿಂದು ಯುವಕನೊಂದಿಗೆ ಆಕೆಯ ವಿವಾಹ ನಡೆಯುವುದಕ್ಕಿಂತ ಒಂದು ತಿಂಗಳು ಮುಂಚೆ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಳು.

ಬಲವಂತದ ಕ್ರಮಗಳ ಮೂಲಕ ತಮ್ಮ ಸಂಬಂಧಿಕರು ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ನಡೆಸಬಾರದೆಂದು ಕೋರ್ಟ್ ಆದೇಶಿಸಬೇಕೆಂದು ಕೋರಿ ದಂಪತಿ ಸಲ್ಲಿಸಿದ್ದ ಅಪೀಲನ್ನು ನ್ಯಾಯಾಲಯದ ಜಸ್ಟಿಸ್ ಮಹೇಶ್ ಚಂದ್ರ ತ್ರಿಪಾಠಿ ಅವರ ನೇತೃತ್ವದ ಏಕಸದಸ್ಯ ಪೀಠ ತನ್ನ ಸೆಪ್ಟೆಂಬರ್ 23ರ ಆದೇಶದಲ್ಲಿ ತಿರಸ್ಕರಿಸಿತ್ತು.

"ಮೊದಲು ಅಪೀಲುದಾರೆ 29.6.2020ರಂದು ಮತಾಂತರಗೊಂಡು, ನಂತರ ಒಂದು ತಿಂಗಳ ನಂತರ 31.7.2020ರಲ್ಲಿ ಆಕೆ ವಿವಾಹವಾಗಿರುವುದರಿಂದ ವಿವಾಹದ ಏಕೈಕ ಉದ್ದೇಶದಿಂದ ಮತಾಂತರ ನಡೆದಿದೆ.'' ಎಂದು ಆದೇಶದಲ್ಲಿ ಹೇಳಿದೆಯಲ್ಲದೆ ತಾನು 2014ರಲ್ಲಿ ಬೇರೊಂದು ಪ್ರಕರಣ ಸಂಬಂಧ ನೀಡಿದ ತೀರ್ಪಿನಲ್ಲೂ "ಕೇವಲ ವಿವಾಹದ ಉದ್ದೇಶದಿಂದ ಮತಾಂತರ ಸ್ವೀಕಾರಾರ್ಹವಲ್ಲ" ಎಂದು ಹೇಳಿರುವುದನ್ನು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News