ಮುನಿರತ್ನಗೆ 40 ಸಾವಿರ ಮತಗಳ ಅಂತರದಿಂದ ಗೆಲುವು: ಯಡಿಯೂರಪ್ಪ ವಿಶ್ವಾಸ

Update: 2020-10-31 11:31 GMT

ಬೆಂಗಳೂರು, ಅ.31: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ರಾಜ್ಯ ಘಟಕ ಶನಿವಾರ ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಈಗಾಗಲೇ ಗೆಲುವು ಸಾಧಿಸುವುದು ಖಚಿತಗೊಂಡಿದ್ದು, ಗೆಲುವಿನ ಅಂತರವಷ್ಟೇ ನಿರ್ಧಾರವಾಗಬೇಕಿದೆ ಎಂದು ತಿಳಿಸಿದರು.

ಮುನಿರತ್ನ ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದವರು. ಇಲ್ಲಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಆದರೆ, ಅವರ ಕುರಿತು ವಿರೋಧ ಪಕ್ಷಗಳ ಮುಖಂಡರು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆಪಾದಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಜಯ ಸಾಧಿಸಿದೆ. ನಂತರ ನಡೆದ ಉಪ ಚುನಾವಣೆಯಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವು ದೊರಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎನ್ನುವುದು ಈಗಾಗಲೇ ತಿಳಿದಿದೆ. ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಎರಡೂ ಪಕ್ಷಗಳಿಗೆ ಸೋಲು ಖಚಿತ ಎಂದು ಹೇಳಿದರು.

ಮಾತಿಗೆ ಬೆಲೆ ಕೊಡಿ: ಇತ್ತೀಚಿಗೆ ಅಂತ್ಯಗೊಂಡ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಹಗುರವಾಗಿ ಮಾತನಾಡಿದ್ದರು. ಅವರಿಗೆ ಮುಂದಿನ ದಿನಗಳಲ್ಲಿ ಯಾವ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಬಿಡುವುದಿಲ್ಲ ಎಂದು ಹೇಳಿದ್ದೇನೆ. ಈ ನಿಟ್ಟಿನಲ್ಲಿ ಆರ್.ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನರನ್ನು ಗೆಲ್ಲಿಸುವ ಮೂಲಕ ಮತದಾರರು ನನ್ನ ಮಾತನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು.

ತಿಂಗಳ ಗಡುವು: ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಗರದ ರಸ್ತೆಗಳ ಗುಂಡಿ ಮುಚ್ಚಲು ಒಂದು ತಿಂಗಳ ಗಡುವು ನೀಡಿದ್ದೇನೆ. ನಗರದಲ್ಲಿ ಮಳೆ ಸುರಿದಾಗ ಪ್ರವಾಹ ಸೃಷ್ಟಿಯಾಗಿ ಜನರಿಗೆ ಸಮಸ್ಯೆ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ. ಮೂರು ತಿಂಗಳೊಳಗೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಆಗಬಾರದು: ನನ್ನ ಕ್ಷೇತ್ರವು ಇನ್ನೊಂದು ಕೆಜಿ ಹಳ್ಳಿ, ಡಿ.ಜೆ.ಹಳ್ಳಿಯಂತಾಗಬಾರದು. ಕಾಂಗ್ರೆಸ್ ಪಕ್ಷದವರು ಸ್ವಾರ್ಥಕ್ಕಾಗಿ ಗಲಭೆ ಮಾಡಿಸಿದ್ದಾರೆ. ಅಂತಹ ಸ್ಥಿತಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಾಗಬಾರದು. ಅದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಮನವಿ ಮಾಡಿದ್ದಾರೆ.

ನಾವು ಸ್ವಾರ್ಥಕ್ಕಾಗಿ ಪಕ್ಷ ತ್ಯಜಿಸಲಿಲ್ಲ. ಅಭಿವೃದ್ಧಿ ಕಾರ್ಯದ ನಿರೀಕ್ಷೆ ಇರಿಸಿ ಜನರು ನಮ್ಮನ್ನು ಆಯ್ಕೆ ಮಾಡಿದ್ದರು. ಆಡಳಿತ ಪಕ್ಷದಲ್ಲಿದ್ದರೂ ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿರಲಿಲ್ಲ. ಆ ಪಕ್ಷವದರು ಮಾಡಿದ ತಪ್ಪಿನಿಂದಾಗಿ ಹೊರ ಬಂದೆವು. ಅವರು ನಮ್ಮತ್ತ ಬೆರಳು ತೋರುವ ಮೊದಲು ತಮ್ಮನ್ನು ತಾವು ಸರಿಪಡಿಸಿಕೊಳ್ಳಲಿ ಎಂದರು.

ಸಚಿವರಾದ ಆರ್. ಅಶೋಕ, ಬೈರತಿ ಬಸವರಾಜ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಶಾಸಕರಾದ ಅರವಿಂದ ಲಿಂಬಾವಳಿ, ಶಿವನಗೌಡ ನಾಯಕ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News