ಕೋವಿಡ್-19: ಇದೇ ಮೊದಲ ಬಾರಿಗೆ ದೇಶದಲ್ಲಿ ಸಾವಿನ ದರ ಶೇ.1.5ಕ್ಕೆ ಇಳಿಕೆ

Update: 2020-10-31 18:13 GMT

ಹೊಸದಿಲ್ಲಿ,ಅ.31: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 48,268 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 81,37,119ಕ್ಕೇರಿದೆ. ಈ ಅವಧಿಯಲ್ಲಿ 551 ಜನರು ಮೃತಪಟ್ಟಿದ್ದು,ಒಟ್ಟು ಸಾವುಗಳ ಸಂಖ್ಯೆ 1,21,641ಕ್ಕೆ ತಲುಪಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

5,82,649 ಸಕ್ರಿಯ ಕೋವಿಡ್-19 ಪ್ರಕರಣಗಳಿದ್ದು,ಈವರೆಗೆ 74,32,829 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದೇ ಮೊದಲ ಬಾರಿಗೆ ದೇಶದಲ್ಲಿ ಕೋವಿಡ್ ಸಾವುಗಳ ದರ ಶೇ.1.5ಕ್ಕೆ ಇಳಿದಿದೆ.

ತನ್ಮಧ್ಯೆ ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ದಿನವೂ 5,000ಕ್ಕೂ ಅಧಿಕ ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಮಾಸ್ಕ್ ಧರಿಸುವುದರ ಮಹತ್ವಕ್ಕೆ ಒತ್ತು ನೀಡಿದ್ದಾರೆ. ಕೊರೋನ ವೈರಸ್‌ಗೆ ಲಸಿಕೆ ಲಭ್ಯವಾಗುವವರೆಗೂ ಮಾಸ್ಕ್ ಅನ್ನೇ ಲಸಿಕೆಯೆಂದು ಪರಿಗಣಿಸುವಂತೆ ಅವರು ಶುಕ್ರವಾರ ದಿಲ್ಲಿಗರನ್ನು ಕೋರಿಕೊಂಡಿದ್ದಾರೆ.

ದಿಲ್ಲಿಯಲ್ಲಿ ಶುಕ್ರವಾರ 5,891 ಹೊಸ ಪ್ರಕರಣಗಳು ವರದಿಯಾಗಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 3,81,644ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 47 ಜನರು ಸಾವನ್ನಪ್ಪಿದ್ದು,ಒಟ್ಟು ಸಾವುಗಳ ಸಂಖ್ಯೆ 6,470ಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News