ರಾಜ್ಯದಲ್ಲಿ ಇನ್ನೆರಡು ತಿಂಗಳು ಗ್ರಾಹಕರಿಗೆ ಕಣ್ಣೀರು ತರಿಸಲಿದೆ ಈರುಳ್ಳಿ

Update: 2020-11-04 07:06 GMT

ಬೆಂಗಳೂರು, ನ. 3: ರಾಜ್ಯದಲ್ಲಿ ಇನ್ನೂ ಎರಡು ತಿಂಗಳವರೆಗೂ ಈರುಳ್ಳಿ ಬೆಲೆ ಗ್ರಾಹಕರ ಕೈ ಸುಡಲಿದ್ದು, ಮುಂದಿನ ವರ್ಷದ ಜನವರಿಯ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗಳಿಗೆ ಈರುಳ್ಳಿ ಬಂದರಷ್ಟೇ ಗ್ರಾಹಕರಿಗೆ ಸಮಾಧಾನಕರವಾಗುವ ದರದಲ್ಲಿ ಸಿಗುತ್ತವೆ.

ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕರ್ನಾಟಕದ ಈರುಳ್ಳಿಯು ಸಂಪೂರ್ಣ ನಾಶವಾಗಿದೆ. ಅಲ್ಲದೆ, ಕರ್ನಾಟಕಕ್ಕೆ ನೆರೆ ರಾಜ್ಯವಾದ ಮಹಾರಾಷ್ಟ್ರದಿಂದ ಈರುಳ್ಳಿ ರಫ್ತು ಆಗುತ್ತದೆ. ಆದರೆ, ಅಲ್ಲಿಯೂ ಅತಿಯಾದ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿರುವುದರಿಂದ ಎಪಿಎಂಸಿ ಯಾರ್ಡ್‍ಗಳಿಗೂ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಈರುಳ್ಳಿ ಬರುತ್ತಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದಾದ್ಯಂತ ವಿವಿಧ ಕಡೆಗಳಲ್ಲಿರುವ ಗೋದಾಮುಗಳಲ್ಲಿ ಸಂಗ್ರಹಿಸಲ್ಪಟ್ಟಿರುವ ಈರುಳ್ಳಿ ಇದೀಗ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತಿದೆ. ಗೋದಾಮುಗಳಲ್ಲಿ ಈರುಳ್ಳಿಯ ಸಂಗ್ರಹ ಮುಕ್ತಾಯ ಹಂತಕ್ಕೆ ಬರುವ ವೇಳೆಗೂ ಮತ್ತೊಂದು ಹಂತದ ಬೆಲೆ ಏರಿಕೆಯನ್ನು ಗ್ರಾಹಕರು ಎದುರಿಸುವಂತಾಗುತ್ತದೆ. ಇನ್ನು, ರೈತರಿಂದ ಗುಣಮಟ್ಟದ ಈರುಳ್ಳಿ ಸಿಗುತ್ತಿಲ್ಲ. ಅಲ್ಲದೆ, ಗೋದಾಮುಗಳಿಂದ ಬರುತ್ತಿರುವ ಈರುಳ್ಳಿಯಲ್ಲಿಯೂ ದಿನದಿಂದ ದಿನಕ್ಕೆ ಗುಣಮಟ್ಟ ಕಳೆದುಕೊಳ್ಳುತ್ತಿದೆ ಎಂದು ಯಶವಂತಪುರದ ಎಪಿಎಂಸಿ ಗೋದಾಮಿನ ನರೇಶ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿಗೆ ನಿತ್ಯ 60-70 ಲೋಡ್: ಬೆಂಗಳೂರು ನಗರ ಮತ್ತು ಸುತ್ತಮುತ್ತ ಹೋಟೆಲ್‍ಗಳು, ಕ್ಯಾಂಟೀನ್‍ಗಳು, ಮನೆಗಳಿಗೆ ನಿತ್ಯ ಕನಿಷ್ಠ 60-70 ಲೋಡು ಈರುಳ್ಳಿ ಬೇಕಾಗುತ್ತದೆ. ಇದು ಯಶವಂತಪುರ ಎಪಿಎಂಸಿಯಿಂದ ರವಾನೆಯಾಗುತ್ತದೆ. ಆದರೆ, ಕಳೆದ ಒಂದು ವಾರ, ಹತ್ತು ದಿನಗಳಿಂದ ನಿತ್ಯ ರವಾನೆಯಾಗುವ ಲೋಡ್‍ಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಯಶವಂತಪುರ ಎಪಿಎಂಸಿಯ ರವಿ ಟ್ರೇಡಿಂಗ್ ಕಂಪನಿಯ ಸಗಟು ವ್ಯಾಪಾರಿ ಬಿ.ರವಿಶಂಕರ್ ಮಾಹಿತಿ ನೀಡಿದ್ದಾರೆ.

ಕಳಪೆ ಈರುಳ್ಳಿಗೆ ಕಾರಣ: ಅತಿವೃಷ್ಟಿಯಿಂದಾಗಿ ರಾಜ್ಯದ ಈರುಳ್ಳಿ ಬೆಳೆಗೆ ಅಪಾರ ಹಾನಿಯಾಗಿದ್ದು, ಕೆಲವೆಡೆ ಬೆಳೆಗೆ ಕೊಳೆ ರೋಗ ತಗುಲಿದೆ. ಇದೀಗ ಮಾರುಕಟ್ಟೆಯಿಂದ ಒಳ್ಳೆಯದೆಂದು ಎಂತಹ ಈರುಳ್ಳಿಯನ್ನು ಖರೀದಿಸಿ ಮನೆಗೆ ತಂದರೂ ಒಳಗಡೆ ಕೊಳೆತಿರುತ್ತದೆ. ಮಾರುಕಟ್ಟೆಗೆ ಬರುತ್ತಿರುವುದು ಸಂಗ್ರಹಿತ ಈರುಳ್ಳಿಯಾಗಿರುವುದರಿಂದ ಈ ರೀತಿ ಕಳಪೆ ಈರುಳ್ಳಿ ಸಿಗುತ್ತಿದೆ ಎಂದು ಸಗಟು ವ್ಯಾಪಾರಿ ಮುದ್ದಣ್ಣ ತಿಳಿಸಿದ್ದಾರೆ.

ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದರಿಂದ ಬೆಲೆ ಅಧಿಕವಾಗಿದೆ. ಆದರೂ ಸಹ ಗುಣಮಟ್ಟದ ಈರುಳ್ಳಿ ಮಾತ್ರ ಸಿಗುತ್ತಿಲ್ಲ. ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಇದೇ ಸ್ಥಿತಿಯಿದೆ. ಕಳೆದ 15-20 ದಿನಗಳ ಹಿಂದೆ ಕೆ.ಜಿ. 40-45 ರೂ. ಇದ್ದುದು ಇದೀಗ 90 ರಿಂದ 110 ರೂ.ವರೆಗೆ ತಲುಪಿದೆ. ಅಷ್ಟು ಹಣ ಕೊಟ್ಟು ತಂದರು ಅರ್ಧದಷ್ಟು ಈರುಳ್ಳಿ ಕೊಳೆತಿರುತ್ತದೆ ಎಂದು ಜಯನಗರದ ನಿವಾಸಿ ಮೌನಿಕಾ ಹೇಳಿದ್ದಾರೆ.

ಖರೀದಿಸುವಾಗ ಮೇಲ್ನೋಟಕ್ಕೆ ಈರುಳ್ಳಿ ಚೆನ್ನಾಗಿಯೇ ಕಂಡರೂ ಕತ್ತರಿಸಿದಾಗಲೇ ಅದರ ಬಂಡವಾಳ ತಿಳಿಯುತ್ತಿದೆ. ಅಡುಗೆಗೋ ಅಥವಾ ತಿಂಡಿಗೋ ಬುಟ್ಟಿಯಿಂದ ಎರಡು ಗಡ್ಡೆ ಎತ್ತಿಕೊಂಡು ಕತ್ತರಿಸಿದರೆ ಕೆಲವೊಮ್ಮೆ ಒಂದು ಗಡ್ಡೆ ಮಾತ್ರ ಹಾಳಾಗಿದ್ದರೆ, ಇನ್ನು ಕೆಲವೊಮ್ಮೆ ಎರಡೂ ಹಾಳಾಗಿರುತ್ತವೆ. ಆಟೊಗಳಲ್ಲಿ ನೂರು ರೂಪಾಯಿಗೆ ನಾಲ್ಕು ಅಥವಾ ಐದು ಕೆಜಿ ಮಾರುವವರಿಂದ ಖರೀದಿಸಿದರೆ ಮುಗಿಯಿತು. ಒಮ್ಮೆಗೆ ಅರ್ಧ ಕೆಜಿಯಷ್ಟು ಕತ್ತರಿಸಿದರೂ ಅದರಲ್ಲಿ ಚೆನ್ನಾಗಿರುವ ಈರುಳ್ಳಿ ಸಿಗುವುದು ಕೇವಲ 2-3 ಗಡ್ಡೆ ಮಾತ್ರ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ.

ಪ್ರತಿದಿನ ತರಕಾರಿ ಜತೆಗೆ ಈರುಳ್ಳಿಯನ್ನು ಕಡ್ಡಾಯವಾಗಿ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದೆವು. ಆದರೆ, ಕಳೆದ 10 ದಿನಗಳಿಂದ ಈರುಳ್ಳಿ ಮಾರಾಟ ಮಾಡಲು ಕಷ್ಟವಾಗುತ್ತಿದೆ. ನಾವು ಕೈಗಾಡಿಗಳ ಮೂಲಕವೇ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ದಿನಕ್ಕೆ 500-600 ರೂ.ನಷ್ಟು ಸಂಪಾದನೆ ಮಾಡುತ್ತೇವೆ. ಆದರೆ, ಇಷ್ಟೊಂದು ಬೆಲೆಗಳ ನಡುವೆ ನಾವು ಈ ವ್ಯಾಪಾರವನ್ನೇ ನಂಬಿ ಜೀವನ ನಡೆಸುವುದು ಕಷ್ಟಕರವಾಗುತ್ತಿದೆ ಎಂದು ವಿಜಯನಗರದ ವ್ಯಾಪಾರಿ ಶೇಖ್ ಮುಹಮ್ಮದ್ ಬೇಸರದಿಂದ ನುಡಿದಿದ್ದಾರೆ.

ಎಲ್ಲೆಲ್ಲಿಂದ ಈರುಳ್ಳಿ ಆಗಮನ: ಕರ್ನಾಟಕದ ಕುಷ್ಟಗಿ, ಕೊಪ್ಪಳ, ಬಿಜಾಪುರ, ಬಸವನ ಬಾಗೇವಾಡಿ, ಬಾಗಲಕೋಟೆ, ಗದಗ, ದಾರವಾಡ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಹಿರಿಯೂರು, ಬಳ್ಳಾರಿ ಹೀಗೆ ನಾನಾ ಭಾಗಗಳಿಂದ ಈರುಳ್ಳಿ ಬೆಳೆಯಲಾಗುತ್ತಿದೆ. ಅಲ್ಲದೆ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯ ಪ್ರದೇಶದ ಹಳೆಯ ದಾಸ್ತಾನು ಇರುವಂತಹ ಕಡೆಗಳಿಂದ ಈರುಳ್ಳಿ ಆಗಮಿಸುತ್ತಿದೆ. ಇಡೀ ದೇಶ ಈ ರಾಜ್ಯಗಳ ಈರುಳ್ಳಿಯ ಮೇಲೆಯೇ ಅವಲಂಬಿತವಾಗಿವೆ.

ಅತಿಯಾದ ಮಳೆ, ಪ್ರವಾಹದಿಂದಾಗಿ ಉತ್ತರ ಕರ್ನಾಟಕದಲ್ಲಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತರ ಬಳಿ ಈರುಳ್ಳಿ ಸಿಗದಿರುವುದರಿಂದ ಯಶವಂತಪುರ ಎಪಿಎಂಸಿ ಮೂಲಕ ಹಾಪ್‍ಕಾಮ್ಸ್‍ಗೆ ಈರುಳ್ಳಿ ಖರೀದಿ ಮಾಡಲಾಗುತ್ತಿದೆ. ಅಲ್ಲಿ 65 ರಿಂದ ಆರಂಭವಾಗಿ 80 ರೂ.ವರೆಗೂ ದರ ಇದೆ. ನಾವು ದಿನನಿತ್ಯ 4-5 ಟನ್ ಖರೀದಿ ಮಾಡುತ್ತಿದ್ದೇವೆ. ಆದರೆ, ಇದೀಗ ಮಾರುಕಟ್ಟೆಯಲ್ಲಿಯೂ ಗುಣಮಟ್ಟದ ಈರುಳ್ಳಿಗೆ ಕೊರತೆಯುಂಟಾಗಿದೆ. ಮುಂದಿನ ವರ್ಷದ ಮಾರ್ಚ್ ವರೆಗೂ ಗುಣಮಟ್ಟದ ಈರುಳ್ಳಿ ಕೊರತೆಯುಂಟಾಗಲಿದೆ.

-ಪ್ರಸಾದ್, ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ

ಎಪಿಎಂಸಿಗೆ ಸಧ್ಯಕ್ಕೆ ಹೊಸ ಈರುಳ್ಳಿ ಬರುತ್ತಿಲ್ಲ. ಮಹಾರಾಷ್ಟ್ರದಲ್ಲಿ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಈಗ ನಮಗೆ ಬರುತ್ತಿದೆ. ಇದೇ ರೀತಿಯಲ್ಲಿ ವರ್ಷಾಂತ್ಯದವರೆಗೂ ಮುಂದುವರಿಯಲಿದೆ. ಅನಂತರ ರೈತರು ಬೆಳೆ ಬೆಳೆದ ಬಳಿಕ ಜನವರಿಯಿಂದ ತಕ್ಕಮಟ್ಟಿಗೆ ಸುಧಾರಣೆ ಕಾಣಬಹುದು ಅಥವಾ ಬೇರೆ ಕಡೆಗಳಿಂದ ಆಮದು ಮಾಡಿಕೊಳ್ಳುವ ಸೂಚನೆಯಿದೆ. ಪ್ರಸ್ತುತ ನಮ್ಮ ಬಳಿ ಪ್ರತಿ ಕೆ.ಜಿ.ಗೆ 60 ರಿಂದ 70 ರೂ.ಗೆ ಮಾರಾಟವಾಗುತ್ತಿದೆ.

-ಸಿ.ಉದಯಶಂಕರ್, ಎಪಿಎಂಸಿ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ

ಮಾರುಕಟ್ಟೆಯಿಂದ 70-80 ರೂಪಾಯಿ ಕೊಟ್ಟು ಈರುಳ್ಳಿಯನ್ನು ಖರೀದಿ ಮಾಡಿಕೊಂಡು ಬರುತ್ತೇವೆ. ನಾವಿಲ್ಲಿ ಅದನ್ನು 100 ರೂ.ಗೆ ಮಾರಾಟ ಮಾಡುತ್ತೇವೆ. ಆದರೆ, ಇದೀಗ ಈರುಳ್ಳಿಯ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರೂ ಈರುಳ್ಳಿಯನ್ನು ಕೊಳ್ಳಲು ಮುಂದಾಗುತ್ತಿಲ್ಲ. ನಾವು ಖರೀದಿ ಮಾಡಿಕೊಂಡು ಬರುವ ಈರುಳ್ಳಿಯನ್ನು ಒಂದೆರಡು ದಿನಗಳಲ್ಲಿ ಮಾರಾಟ ಮಾಡಿ ಬಿಡಬೇಕು. ಇಲ್ಲದಿದ್ದರೆ ಅವು ಕೊಳೆತು ಹೋಗುತ್ತವೆ. ಅದರಿಂದ ನಮಗೆ ಲಾಸ್ ಆಗುತ್ತದೆ. ಅನಿವಾರ್ಯವಾಗಿ ಅದನ್ನು ಮಾರಾಟ ಮಾಡಲೇಬೇಕಿದೆ. ಇಲ್ಲದಿದ್ದರೆ ಬೇರೆ ತರಕಾರಿಗಳನ್ನು ಕೊಳ್ಳಲು ಜನ ಬರುವುದಿಲ್ಲ.

-ಮುನಿಲಕ್ಷ್ಮಮ್ಮ, ಮಲ್ಲೇಶ್ವರಂ ಮಾರುಕಟ್ಟೆಯ ವ್ಯಾಪಾರಿ

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News