ಮೋಹನ್ ಭಾಗ್ವತ್‌ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಣೆ

Update: 2020-11-05 18:47 GMT

ಭೋಪಾಲ್, ನ. 5: ಆರೆಸ್ಸೆಸ್ ಮುಖ್ಯಸ್ಥ ಡಾ. ಮೋಹನ್ ಭಾಗ್ವತ್‌ ಅವರ ಅವಹೇಳನಕಾರಿ ಭಾವಚಿತ್ರವನ್ನು ಪೋಸ್ಟ್ ಮಾಡಿದ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಮಧ್ಯಪ್ರದೇಶ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ಬಂಧನದ ಭೀತಿಯಲ್ಲಿರುವ ಆರೋಪಿಯಾದ ಕೌಶಲ್ ಸಿಂಗ್ ಮಸ್ರಾಮ್ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಬಿ.ಕೆ. ಶ್ರೀವಾತ್ಸವ ಅವರ ನ್ಯಾಯಪೀಠ ವಿಚಾರಣೆ ನಡೆಸಿ ಜಾಮೀನು ನೀಡಲು ನಿರಾಕರಿಸಿತು. ಡಾ. ಮೋಹನ್ ಭಾಗವತ್ ಅವರ ಅವಹೇಳನಕಾರಿ ಭಾವಚಿತ್ರವನ್ನು ಪೋಸ್ಟ್ ಮಾಡಿದ ಹಾಗೂ ಆ ಪೋಸ್ಟ್ ಅನ್ನು 28 ವ್ಯಕ್ತಿಗಳಿಗೆ ಟ್ಯಾಗ್ ಮಾಡಿದ ಆರೋಪದಲ್ಲಿ ಕೌಶಲ್ ಮೆಸ್ರಾಮ್ ವಿರುದ್ಧ ಉಮರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಫೇಸ್‌ಬುಕ್ ಐ.ಡಿಯನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತನ್ನ ಕಕ್ಷಿದಾರ ಪೊಲೀಸರಿಗೆ ದೂರು ನೀಡಿದ್ದರು ಎಂದು ಮಸ್ರಾಮ್ ಪರ ವಕೀಲರು ವಾದಿಸಿದರು. ಆದರೆ, ನಿರೀಕ್ಷಣಾ ಜಾಮೀನು ವಿಚಾರಣೆಗೆ ಬಾಕಿ ಇರುವ ಮುನ್ನ ಹಾಗೂ ಪ್ರಕರಣ ದಾಖಲಾದ ಎರಡು ತಿಂಗಳ ಬಳಿಕ ಆರೋಪಿ ಐ.ಡಿ. ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News