ಅಬ್ ಕಿ ಬಾರ್ ಬೈಡನ್ ಸರ್ಕಾರ್

Update: 2020-11-09 06:18 GMT

‘‘ಅಮೆರಿಕನ್ ಸಮಾಜವೆಂಬುದು ಎಷ್ಟೊಂದು ವೈರುಧ್ಯಗಳ ಮತ್ತು ಕಪಟ ವೈರುಧ್ಯಗಳ ಕೊಂಪೆಯೆಂದರೆ, ನಿಮ್ಮ ಬಳಿ ಸಾಕಷ್ಟು ಹಾಸ್ಯ ಪ್ರಜ್ಞೆ ಇಲ್ಲದಿದ್ದರೆ ನೀವಿಲ್ಲಿ ಕುಸಿದು ಬೀಳುವುದು ಖಂಡಿತ’’. ಮಾಲ್ಕಮ್ ಎಕ್ಸ್ (1965 ರಲ್ಲಿ ಹತರಾದ ಅಮೆರಿಕದ ಮಾನವ ಹಕ್ಕುಗಳ ಖ್ಯಾತ ಹೋರಾಟಗಾರ)

ಕೊರೋನ ಸಂತ್ರಸ್ತರ ಸಂಖ್ಯೆಯ ದೃಷ್ಟಿಯಿಂದ ಜಾಗತಿಕ ಮಟ್ಟದಲ್ಲಿ ಅಮೆರಿಕ ಪ್ರಥಮ ಮತ್ತು ಭಾರತ ದ್ವಿತೀಯ ಸ್ಥಾನದಲ್ಲಿದೆ. ಈ ಪೈಕಿ ಭಾರತವನ್ನು ಜಗತ್ತಿನ ಅತಿದೊಡ್ಡ ಪ್ರಜಾಸತ್ತೆ ಎಂದು ಕರೆಯುವವರು ಅಮೆರಿಕವನ್ನು ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾಸತ್ತೆ ಎಂದು ಕರೆಯುತ್ತಾರೆ. ಕೊರೋನ ರಂಗದಲ್ಲಿ ಅಮೆರಿಕದ ಕಳಪೆ ಸಾಧನೆ, ಅಮೆರಿಕವನ್ನು ಸ್ವರ್ಗಸದೃಶ ಎಂದು ನಂಬಿದ್ದ ಜಗತ್ತಿನ ಕೋಟ್ಯಂತರ ಮಂದಿಯ ಕಣ್ಣು ತೆರೆಸಿದೆ. ಇದೀಗ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದು, ಸ್ಪಷ್ಟ ಬಹುಮತದ ಆಧಾರದಲ್ಲಿ ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದವರು ಯಾರೆಂಬುದು ನಿಚ್ಚಳವಾಗಿದೆ. ಇಷ್ಟಾಗಿಯೂ ಅಲ್ಲಿಯ ಈವರೆಗಿನ ಅಧ್ಯಕ್ಷ ಮಹಾಶಯರು ತಾನು ತನ್ನ ಪದವಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವುದನ್ನು ಜಗತ್ತೆಲ್ಲಾ ಕಾಣುತ್ತಿದೆ. ಅವರೀಗ ಘನತೆಯೊಂದಿಗೆ ತೆರಳುವರೋ ಅಥವಾ ಕಳೆದ ವಾರ ನಮ್ಮದೇಶದಲ್ಲಿ ಖ್ಯಾತ ಪತ್ರಕರ್ತರೊಬ್ಬರು ತನ್ನನ್ನು ಬಂಧಿಸಲು ಬಂದ ಪೊಲೀಸರ ಮುಂದೆ ಘನತೆ ಮೀರಿ ವರ್ತಿಸಿ, ಕೊನೆಗೆ ತೀರಾ ಹೀನಾಯ ರೀತಿಯಲ್ಲಿ ಪೊಲೀಸ್ ವ್ಯಾನ್‌ಗೆ ತಳ್ಳಲ್ಪಟ್ಟಂತೆ ಈ ಪರಾಜಿತ ಅಧ್ಯಕ್ಷರೂ ಅಪಮಾನಿತರಾಗಿ ಶ್ವೇತಭವನದಿಂದ ಹೊರದಬ್ಬಲ್ಪಡುವರೋ ಎಂಬುದು ಕುತೂಹಲದ ವಿಷಯವಾಗಿದೆ. ಒಂದು ವೇಳೆ ಅವರು ತಮ್ಮ ಸ್ವಭಾವಸಹಜವಾಗಿ ಮೊಂಡುತನ ತೋರಿದರೆ ಮುಂದಿನ ಕೆಲವು ದಿನಗಳಲ್ಲಿ ನಡೆಯಬಹುದಾದ ನಾಟಕೀಯ ಪ್ರಸಂಗಗಳು ‘ಅತ್ಯಂತ ಬಲಿಷ್ಠ ಪ್ರಜಾಸತ್ತೆ’ ಯ ಇತಿಮಿತಿಗಳನ್ನು ಜಗತ್ತಿನ ಮುಂದೆ ಬಿಚ್ಚಿಡಲಿಕ್ಕಿವೆ.

ಅಮೆರಿಕದಲ್ಲಿ ಒಂದು ಅವಧಿಗಾಗಿ ಅಧ್ಯಕ್ಷರಾಗಿರುವವರನ್ನೇ ಎರಡನೇ ಅವಧಿಗಾಗಿ ಚುನಾಯಿಸುವ ಸಂಪ್ರದಾಯವೊಂದಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಹಾಗೆಯೇ ನಡೆದಿದೆ. ಮಾತ್ರವಲ್ಲ, ಕಳೆದ ನೂರು ವರ್ಷಗಳಲ್ಲಿ ನಾಲ್ಕು ಬಾರಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ನಡೆದಿದೆ. ಈ ಹಿನ್ನೆಲೆಯಲ್ಲಿ ಹಲವರು ಟ್ರಂಪ್ ಮತ್ತೆ ಗೆಲ್ಲುತ್ತಾರೆ ಎಂದು ನಿರೀಕ್ಷಿಸಿದ್ದರು. ಭಾರತದಲ್ಲಂತೂ ಟ್ರಂಪ್‌ರ ಜನಾಂಗವಾದದಲ್ಲಿ ತಮ್ಮ ವೈಚಾರಿಕ ಧಾರೆಯ ಛಾಯೆಯನ್ನು ಕಂಡಿದ್ದ ಅನೇಕರು ಅವರ ಉತ್ಸಾಹಿ ಬೆಂಬಲಿಗರಾಗಿ ಮಾರ್ಪಟ್ಟಿದ್ದರು. ಅಮೆರಿಕದೊಳಗಿನ ಭಾರತೀಯ ಬಲಪಂಥದ ಮಂದಿ ಕೂಡ ಟ್ರಂಪ್ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದರು. ಸಾಲದ್ದಕ್ಕೆ ಅಮೆರಿಕ ಚುನಾವಣೆಯ ಸಿದ್ಧತೆಯಲ್ಲಿದ್ದ ದಿನಗಳಲ್ಲೇ ಟೆಕ್ಸಸ್‌ನಲ್ಲಿ ಒಂದು ಬೃಹತ್ ಸಮಾವೇಶದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜತಾಂತ್ರಿಕ ಮರ್ಯಾದೆಗಳನ್ನು ಗಾಳಿಗೆ ತೂರಿ ‘‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’’ ಎಂಬ ಘೋಷಣೆ ಕೂಗಿದ್ದರು. ಮುಂದೆ ಅದೇ ಮಾತನ್ನು ಟ್ರಂಪ್ ತಮ್ಮಲ್ಲಿನ ಭಾರತೀಯ ಮೂಲದ ಮತದಾರರಿಗಾಗಿ ತಮ್ಮದೇ ಆದ ವಿಕಟ ಶೈಲಿಯಲ್ಲಿ ಪುನರಾವರ್ತಿಸಿದ್ದರು. ಅಂಥವರೀಗ ಟ್ರಂಪ್ ಸೋಲಿನಿಂದಾಗಿ, ಒಬ್ಬ ಪರಮಾಪ್ತನನ್ನು ಕಳೆದುಕೊಂಡವರಂತೆ ತುಂಬಾ ನಿರಾಶರಾಗಿದ್ದ್ದಾರೆ.

ಟ್ರಂಪ್ ಮತ್ತು ಬೈಡನ್ ಪೈಕಿ ಅಥವಾ ರಿಪಬ್ಲಿಕನ್ ಮತ್ತು ಡೆಮೋಕ್ರಾಟ್ ಪೈಕಿ ಭಾರತೀಯರ ಪಾಲಿಗೆ ಯಾರು ಹಿತವರು? ಸದ್ಯ ಈ ಜಿಜ್ಞಾಸೆ ಹಲವರನ್ನು ಕಾಡುತ್ತಿದೆ. ಈ ವಿಷಯದಲ್ಲಿ ಎರಡೂ ಕಡೆಯಿಂದ ಕೇಳಿ ಬರುವ ಹೆಚ್ಚಿನ ವಾದಗಳನ್ನು ನೋಡಿದರೆ ಅವೆಲ್ಲಾ ಆಡಳಿತಗಾರರಲ್ಲಿ ವಿಮೋಚಕರನ್ನು ಕಾಣುವ ಪ್ರಾಚೀನ ಮುಗ್ಧತೆ ಅಥವಾ ಮೂರ್ಖತನದ ಭಾಗವೆಂಬಂತೆ ಕಾಣಿಸುತ್ತವೆ. ಅಮೆರಿಕದ ಇತಿಹಾಸ ಮತ್ತು ವರ್ತಮಾನ ಬಲ್ಲವರು ಯಾರೂ, ಅಲ್ಲಿ ಯಾವ ವ್ಯಕ್ತಿ ಅಧ್ಯಕ್ಷರಾದರೂ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅವರಿಂದ ದೊಡ್ಡ ಉಪಕಾರಗಳನ್ನೇನೂ ನಿರೀಕ್ಷಿಸುವುದಿಲ್ಲ. ಏಕೆಂದರೆ ಹಿಂದೆಯೂ, ಈಗಲೂ ಅಮೆರಿಕದ ಎಲ್ಲ ಆಂತರಿಕ ಧೋರಣೆಗಳು ಮತ್ತು ಅಂತರ್‌ರಾಷ್ಟ್ರೀಯ ನಿಲುವುಗಳು ಮುಖ್ಯವಾಗಿ ಎರಡು ಗುರಿಗಳನ್ನು ಹೊಂದಿರುತ್ತವೆ. ಮೊದಲನೆಯದು, ಸ್ವತಃ ಆ ದೇಶವನ್ನು ನಿಯಂತ್ರಿಸುತ್ತಿರುವ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡುವುದು. ಎರಡನೆಯದು, ಆಂಶಿಕವಾಗಿ ಮತ್ತು ತಾತ್ಕಾಲಿಕವಾಗಿ ಆ ದೇಶದ ಒಳಗಿರುವ ವಿವಿಧ ವರ್ಗಗಳು ಪ್ರಸ್ತುತ ಆಳುವ ಶಕ್ತಿಗಳಿಗೆ ವಿಧೇಯವಾಗಿರುವಂತೆ ನೋಡಿಕೊಳ್ಳುವುದು.

ನಮ್ಮ ವಿಮೋಚಕರಾದ ಮೋದಿಯವರು ಟ್ರಂಪ್‌ರನ್ನು ಭೇಟಿಯಾದಾಗಲೆಲ್ಲ ತಬ್ಬಲಿಗೆ ತಾಯಿ ಸಿಕ್ಕಿದಳೋ ಎಂಬಂತೆ ಭಾವುಕರಾಗಿ, ಹಾರಿಹೋಗಿ ಅವರನ್ನು ಅಪ್ಪಿ ಮುದ್ದಾಡಿದ ದೃಶ್ಯಗಳನ್ನು ಕಂಡ ಹಲವರು ಟ್ರಂಪ್‌ರಲ್ಲಿಯೂ ವಿಮೋಚಕನನ್ನು ಕಂಡಿದ್ದರು. ಟ್ರಂಪ್‌ರ ಪಕ್ಷ ನಮ್ಮ ಆಡಳಿತಪಕ್ಷದ ಮಿತ್ರಪಕ್ಷ ಎಂದೂ ನಂಬಿದ್ದರು. ಆದರೆ ಇದೇ ನಮ್ಮ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಅವರ ಮೇಲೆ ಸಮೂಹ ಹತ್ಯೆಯ ಆರೋಪವಿದ್ದಾಗ ಅವರ ಪಾಲಿಗೆ ಅಮೆರಿಕದ ವೀಝಾವನ್ನು ನಿಷೇಧಿಸಿದ್ದು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಅಂದಿನ ಸರಕಾರವಾಗಿತ್ತು ಎಂಬುದನ್ನಾಗಲಿ, ಮೋದಿಯವರು ‘‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’’ಎಂಬ ಭಾವುಕ ಘೋಷಣೆ ಕೂಗಿದ ಕೇವಲ ಒಂದೇ ತಿಂಗಳ ಬಳಿಕ ಟ್ರಂಪ್ ಅವರು ತಮ್ಮ ಅಧ್ಯಕ್ಷೀಯ ಸಂವಾದದ ವೇಳೆ ಜಗತ್ತಿನ ಮುಂದೆ ಭಾರತವನ್ನು ‘ಕೊಳಕು ದೇಶ’ ಎಂದು ಕರೆದು ನಿಂದಿಸಿದ್ದರು ಎಂಬುದನ್ನಾಗಲಿ ಈ ಮಂದಿ ಗಮನಿಸಿದಂತಿಲ್ಲ. ಜೋ ಬೈಡನ್‌ರ ಭಾರತೀಯ ಬೆಂಬಲಿಗರೂ ಅಷ್ಟೇ. ಬೈಡನ್ 36 ವರ್ಷ ಸೆನೆಟ್ ಸದಸ್ಯರಾಗಿ ಹಾಗೂ 8 ವರ್ಷ ಅಮೆರಿಕದ ಉಪಾಧ್ಯಕ್ಷರಾಗಿ ಅನುಭವ ಉಳ್ಳವರು, ಭಾರತದ ಬಗ್ಗೆ ಗೌರವ ಉಳ್ಳವರು, ‘‘2020ರ ಹೊತ್ತಿಗೆ ಭಾರತ ಮತ್ತು ಅಮೆರಿಕ ಜಗತ್ತಿನ ಅತ್ಯಂತ ಪರಮಾಪ್ತ ರಾಷ್ಟ್ರಗಳಾಗಬೇಕೆಂಬುದು ನನ್ನ ಕನಸು’’ ಎಂಬ ದೊಡ್ಡ ಮಾತನ್ನು 2006 ರಲ್ಲೇ ಘೋಷಿಸಿದವರು, ಮಾನವ ಹಕ್ಕು, ಧಾರ್ಮಿಕ ಸ್ವಾತಂತ್ರ ಇತ್ಯಾದಿಗಳ ಬಗ್ಗೆ ಕಾಳಜಿ ಉಳ್ಳವರು, ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷೆಯಾಗಿಸಿಕೊಂಡವರು ಮುಂತಾದ ಕಾರಣಗಳಿಗಾಗಿ ಅವರು ಬೈಡನ್‌ರಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾರೆ. ಒಂದು ದಶಕದ ಹಿಂದೆ ಇದೇ ಬೈಡನ್‌ರ ಡೆಮೋಕ್ರಾಟ್ ಪಕ್ಷದ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾದಾಗ ಅವರ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆಗಳಿದ್ದವು. ಮೋದಿಯವರಂತೂ ಅತ್ಯುತ್ಸಾಹದಿಂದ ಒಬಾಮರನ್ನು ಅನೌಪಚಾರಿಕವಾಗಿ ಬರಾಕ್, ಬರಾಕ್ ಎಂದು ಕರೆದು ಭಾರೀ ಆತ್ಮೀಯತೆ ಪ್ರದರ್ಶಿಸಿದ್ದರು. ಆದರೆ ಅವರಿಂದಲೂ ನಮ್ಮ ದೇಶಕ್ಕೆ ದೊಡ್ಡ ಉಪಕಾರವೇನೂ ಆಗಲಿಲ್ಲ.

ಅಮೆರಿಕದ ಅಧ್ಯಕ್ಷರಾಗುವವರು ಮತ್ತು ಅಲ್ಲಿ ಆಡಳಿತ ಪಕ್ಷವಾಗುವವರು ಜಗತ್ತಿಗೇನೂ ಹಿತವನ್ನು ಮಾಡದಿದ್ದರೂ ಜಗತ್ತಿಗೆ ತಮ್ಮಿಂದಾಗುವ ಅಹಿತವನ್ನು ಒಂದಷ್ಟು ಕಡಿಮೆ ಮಾಡಿದರೆ ಅದುವೇ ಒಂದು ದೊಡ್ಡ ಉಪಕಾರ. ಜಗತ್ತಿಗೆ ಶಸ್ತ್ರಾಸ್ತ್ರ ಮಾರುವುದನ್ನೇ ತನ್ನ ಪ್ರಮುಖ ಧಂದೆಯಾಗಿಸಿಕೊಂಡಿರುವ ಆ ದೇಶ, ಜಾಗತಿಕ ಶಾಂತಿಗೆ ಏನಾದರೂ ಕೊಡುಗೆ ನೀಡಬಲ್ಲದೆಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ಕೇವಲ ತನ್ನ ಶಸ್ತ್ರಗಳ ಮಾರಾಟಕ್ಕಾಗಿ ಜಗತ್ತಿನ ವಿವಿಧೆಡೆ ಯುದ್ಧಪ್ರಚೋದಿಸುವ ಅಮೆರಿಕದ ಸಾಂಪ್ರದಾಯಿಕ ನೀಚ ಯೋಜನೆಯನ್ನು ಬೈಡನ್ ಸರಕಾರವು ತಕ್ಕ ಮಟ್ಟಿಗಾದರೂ ನಿಯಂತ್ರಿಸಿದರೆ ಅದನ್ನು ಕೂಡ ಒಂದು ದೊಡ್ಡ ಉಪಕಾರವಾಗಿ ಪರಿಗಣಿಸಬಹುದು.

ನಿಜವಾಗಿ ಅಮೆರಿಕದ ಆಡಳಿತ ನಡೆಸುವವರು ಸ್ವತಃ ತಮ್ಮ ದೇಶದ ಹಿತಕ್ಕಾಗಿ ಮಾಡಬಹುದಾದ ಮತ್ತು ಮಾಡಬೇಕಾದ ಹಲವು ಕಾರ್ಯಗಳಿವೆ. ಶ್ವೇತ ಭವನವು ಆಳುವ ಅಮೆರಿಕದಲ್ಲಿ ಶ್ವೇತವಲ್ಲದ ಬೇರೆ ಬಣ್ಣದವರ ವಿರುದ್ಧ ಮತ್ತು ವಿಶೇಷವಾಗಿ ಕರಿಬಣ್ಣದ ನಾಗರಿಕರ ವಿರುದ್ಧ ತಾರತಮ್ಯ ಕಳವಳಕಾರಿ ಪ್ರಮಾಣದಲ್ಲಿದೆ. 1776 ರಲ್ಲಿ ಸ್ವಾತಂತ್ರ ಘೋಷಿಸಿದ ಅಮೆರಿಕ ಒಬ್ಬ ಕರಿಯ ಮೂಲದ ವ್ಯಕ್ತಿಯನ್ನು ಅಧ್ಯಕ್ಷನಾಗಿ ಆರಿಸಲು 233 ವರ್ಷಗಳನ್ನು ತೆಗೆದುಕೊಂಡಿತೆಂಬುದು, ಅಲ್ಲಿ ಜನಾಂಗತಾರತಮ್ಯದ ಬೇರುಗಳು ಎಷ್ಟು ಆಳವಾಗಿವೆ ಎಂಬುದರ ಸೂಚಕವಾಗಿದೆ. ಅಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಸಾಕಷ್ಟು ಕಾನೂನುಗಳಿದ್ದರೂ ಅಲ್ಲಿನ ಸಮಾಜದಲ್ಲಿ ಜನಾಂಗೀಯ ಉದ್ವಿಗ್ನತೆಯು ಮುಚ್ಚಿಡಲು ಸಾಧ್ಯವೇ ಇಲ್ಲದಷ್ಟು ದೊಡ್ಡ ಪ್ರಮಾಣದಲ್ಲಿ ಮೆರೆಯುತ್ತಿದೆ. ಬಿಳಿಯ ಜನಾಂಗವಾದಿಗಳು ಕರಿಯರನ್ನು ಮತ್ತು ಇತರ ಜನಾಂಗಗಳ ಜನರನ್ನು ತೀರಾ ತಾತ್ಸಾರದಿಂದ ಕಾಣುತ್ತಾರೆ. ಹೆಚ್ಚಿನ ಜನಾಂಗೀಯ ಅಲ್ಪ ಸಂಖ್ಯಾತರು ಅಲ್ಲಿ ಹೆಜ್ಜೆಹೆಜ್ಜೆಗೆ ವಿವಿಧ ಸ್ವರೂಪದ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ.

ಹಾಗೆಯೇ ಅಮೆರಿಕದಲ್ಲಿ ಬಡವರು ಮತ್ತು ಶ್ರೀಮಂತರ ನಡುವಣ ಅಂತರ ಆಘಾತಕಾರಿ ಎನ್ನುವಷ್ಟು ಬೃಹದಾಕಾರ ತಾಳಿದೆ. ದೇಶದಲ್ಲಿ ಧಾರಾಳ ಸಂಪತ್ತು ಮತ್ತು ಸಂಪನ್ಮೂಲಗಳಿದ್ದರೂ ಅದು ಕೇವಲ ಕೆಲವರ ಮುಷ್ಟಿಯಲ್ಲಿದ್ದು ಸುಮಾರು ಶೇ.40ರಷ್ಟು ಜನ ಸಾಮಾನ್ಯ ದಾರಿದ್ರದಿಂದ ಮತ್ತು ಶೇ.12ರಷ್ಟು ಜನ ಕಡು ದಾರಿದ್ರದಿಂದ ಪೀಡಿತರಾಗಿದ್ದಾರೆ. ವಾಯು ಮಾಲಿನ್ಯದ ಸಮಸ್ಯೆ ಕೂಡ ಅಲ್ಲಿ ಗಂಭೀರ ಮಟ್ಟದಲ್ಲಿದೆ. ಬಹುತೇಕ ಶೇ.50ರಷ್ಟು ಮಂದಿ ವಾಯುಮಾಲಿನ್ಯದಿಂದ ನೇರವಾಗಿ ಪೀಡಿತರಾಗಿದ್ದಾರೆ. ಅಲ್ಲಿ ಸಂಭವಿಸುವ ಒಟ್ಟು ಸಾವುಗಳ ಪೈಕಿ ಶೇ.4ರಷ್ಟು ಸಾವುಗಳು ಪ್ರಕ್ಷುಬ್ದ ವಾಯು ಸೇವನೆಯಿಂದ ಸಂಭವಿಸುತ್ತಿವೆ. ಸುಮಾರು ಶೇ.15ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಅಪರಾಧಗಳ ಪ್ರಮಾಣವೂ ತಾರಕದಲ್ಲಿದೆ. ಕಳೆದ ವರ್ಷ ಅಲ್ಲಿ ಕೊಲೆ, ಅತ್ಯಾಚಾರ, ದರೋಡೆ, ಹಲ್ಲೆ ಮುಂತಾದ ಹಿಂಸಾತ್ಮಕ ಅಪರಾಧಗಳ 12 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಅಮೆರಿಕನ್ನರ ಪ್ರಮಾಣ ಶೇ.5ಕ್ಕಿಂತ ಕಡಿಮೆ. ಆದರೆ ಜಗತ್ತಿನಲ್ಲಿ ಜೈಲುವಾಸ ಅನುಭವಿಸುತ್ತಿರುವ ಕೈದಿಗಳ ಪೈಕಿ ಶೇ.20ರಷ್ಟು ಮಂದಿ ಅಮೆರಿಕನ್ನರು. ಕ್ರಮೇಣ ಅಲ್ಲಿಯ ಜನರಲ್ಲಿ ಪ್ರಸ್ತುತ ಸಮಸ್ಯೆಗಳು ಹಾಗೂ ಅಸಮತೋಲನಗಳ ಕುರಿತು ಜಾಗೃತಿ ಬೆಳೆಯುತ್ತಿದೆ. ಬೈಡನ್ ನೇತೃತ್ವದಲ್ಲಿ ರಚಿತವಾಗಲಿರುವ ಹೊಸ ಸರಕಾರ ಈ ವಾಸ್ತವಗಳ ಕುರಿತು ಸಂವೇದನಾ ಶೀಲ ನಿಲುವು ತಾಳಿ, ಜಗತ್ತಿಗೆ ಉಪದೇಶಗಳನ್ನು ನೀಡುವ ಬದಲು ಸ್ವತಃ ತಮ್ಮ ನೆಲದಲ್ಲಿ, ತಮ್ಮದೇ ಸಂವಿಧಾನದಲ್ಲಿರುವ ಸ್ವಾತಂತ್ರ, ಸಮಾನತೆ ಮತ್ತು ಸಾರ್ವತ್ರಿಕ ಕಲ್ಯಾಣದಂತಹ ವೌಲ್ಯಗಳನ್ನು ಅನುಷ್ಠಾನಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News