ಪ್ರತಿ ದಿನ ಮೂರು ಗಂಟೆ ಅರ್ನಬ್ ವಿಚಾರಣೆಗೆ ನ್ಯಾಯಾಲಯ ಅನುಮತಿ

Update: 2020-11-10 03:29 GMT

ಮುಂಬೈ, ನ.10: ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ ರಿಪಬ್ಲಿಕ್ ಟಿವಿ ನಿರೂಪಕ ಅರ್ನಬ್ ಗೋಸ್ವಾಮಿ ಹಾಗೂ ಇತರ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರುವ ನಡುವೆಯೇ ಪ್ರತಿದಿನ ಮೂರು ಗಂಟೆ ವಿಚಾರಣೆ ನಡೆಸಲು ಅಲಿಬಾಗ್ ಮುಖ್ಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅನುಮತಿ ನೀಡಿದೆ.

ಅನ್ವಯ್ ನಾಯ್ಕ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಅರ್ನಬ್ ಮತ್ತು ಇತರ ಇಬ್ಬರು ಆರೋಪಿಗಳನ್ನು ಕಳೆದ ಬುಧವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಆರೋಪಿಗಳ ವಿಚಾರಣೆಗೆ ಪೊಲೀಸರು ಅನುಮತಿ ಕೋರಿದ್ದರು. ನ್ಯಾಯಾಂಗ ಕಸ್ಟಡಿಯನ್ನು ಮಂಜೂರು ಮಾಡಿರುವ ವಿರುದ್ಧದ ಅವರ ಪರಿಷ್ಕೃತ ಅರ್ಜಿ ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇದ್ದು, ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ಇಲ್ಲದ ಕಾರಣ ತನಿಖೆ ಸ್ಥಗಿತಗೊಂಡಿದೆ ಎಂದು ಪೊಲೀಸರು ವಾದಿಸಿದ್ದರು.

ಪೊಲೀಸರ ಮನವಿಯನ್ನು ಪುರಸ್ಕರಿಸಿದ ಜೆಎಂಎಫ್‌ಸಿ ನ್ಯಾಯಾಧೀಶರು ಮೂವರ ವಿಚಾರಣೆಗೆ ಅನುಮತಿ ಮಂಜೂರು ಮಾಡಿದ್ದಾರೆ. ಕಾನೂನು ಪ್ರಕಾರ, ನ್ಯಾಯಾಲಯದ ಆದೇಶದಂತೆ ಜೈಲಿನ ಕಸ್ಟಡಿಯಲ್ಲಿರುವ ಆರೋಪಿಗಳನ್ನು ವಿಚಾರಣೆ ನಡೆಸಲು ಪೊಲೀಸರಿಗೆ ಅವಕಾಶ ಇರುವುದಿಲ್ಲ. ತಲೋಜಾ ಜೈಲಿನಲ್ಲಿರುವ ಅರ್ನಬ್ ಹಾಗೂ ಇತರ ಇಬ್ಬರನ್ನು 10 ಮಂದಿ ರಾಯಗಢ ಪೊಲೀಸರ ತಂಡ ಸೋಮವಾರ ಮೂರು ಗಂಟೆ ಕಾಲ ವಿಚಾರಣೆಗೆ ಗುರಿಪಡಿಸಿತು ಎಂದು ಇನ್‌ಸ್ಪೆಕ್ಟರ್ ಜಮೀಲ್ ಶೇಖ್ ಹೇಳಿದ್ದಾರೆ. ಗೋಸ್ವಾಮಿ, ಫಿರೋಝ್ ಶೇಖ್ ಮತ್ತು ನಿತೀಶ್ ಸಾರ್ಡಾ ಅವರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.

ಅಲಿಬಾಗ್ ಸಿವಿಕ್ ಸ್ಕೂಲ್‌ನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಕ್ವಾರಂಟೈನ್ ಕೇಂದ್ರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವಧಿಯಲ್ಲೂ ಅರ್ನಬ್ ಫೋನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಪೊಲೀಸರು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ರವಿವಾರ ಮೂವರು ಆರೋಪಿಗಳನ್ನು ತಲೋಜಾ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ಆರೋಪಿಗಳನ್ನು ಹದಿನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಹಸ್ತಾಂತರಿಸುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ಕ್ರಮವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News