ವಿಪ್ರೋದ ಅಜೀಂ ಪ್ರೇಮ್‌ಜಿ ಅತ್ಯಂತ ಉದಾರಿ ಭಾರತೀಯ

Update: 2020-11-10 15:23 GMT

ಮುಂಬೈ, ನ.10: ದಿನಾ 22 ಕೋಟಿ ರೂ.ಯಂತೆ 2020ರ ಆರ್ಥಿಕ ಸಾಲಿನಲ್ಲಿ 7,904 ಕೋಟಿ ರೂ. ಹಣವನ್ನು ದಾನಧರ್ಮಕ್ಕೆ ವಿನಿಯೋಗಿಸಿರುವ ಪ್ರಮುಖ ಐಟಿ ಸಂಸ್ಥೆ ವಿಪ್ರೋದ ಅಜೀಂ ಪ್ರೇಮ್‌ಜಿ 2020ರ ಅತ್ಯಂತ ಉದಾರಿ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಹುರುನ್ ರಿಪೋರ್ಟ್ ಇಂಡಿಯ ಮತ್ತು ಎಡೆಲ್ಜಿವ್ ಫೌಂಡೇಷನ್ ಪ್ರಕಟಿಸಿರುವ ಉದಾರಿ ಭಾರತೀಯರ ಪಟ್ಟಿಯಲ್ಲಿ ಪ್ರೇಮ್‌ಜಿ ಅಗ್ರಸ್ಥಾನದಲ್ಲಿದ್ದರೆ, ಎಚ್‌ಸಿಎಲ್ ಟೆಕ್ನಾಲಜಿಸ್‌ನ ಶಿವ ನಾಡರ್ 795 ಕೋಟಿ ರೂ. ದೇಣಿಗೆ ನೀಡುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ದೇಶದ ಅತೀ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ 458 ಕೋಟಿ ರೂ. ದಾನ ಮಾಡುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ. 10 ಕೋಟಿ ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದವರಲ್ಲಿ 78 ವ್ಯಕ್ತಿಗಳೂ ಸೇರಿದ್ದಾರೆ.

ಇವರಲ್ಲಿ ಎಟಿಇ ಚಂದ್ರ ಫೌಂಡೇಷನ್‌ನ ಅಮಿತ್ ಚಂದ್ರ ಮತ್ತು ಅರ್ಚನಾ ಚಂದ್ರ(ತಲಾ 27 ಕೋಟಿ), ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನೀಲೇಕಣಿ(159 ಕೋಟಿ), ಎಸ್. ಗೋಪಾಲಕೃಷ್ಣನ್ (50 ಕೋಟಿ) ಮತ್ತು ಎಸ್‌ಡಿ ಶಿಬುಲಾಲ್(32 ಕೋಟಿ) ಪ್ರಮುಖರು. ಶಿಕ್ಷಣ ಕ್ಷೇತ್ರಕ್ಕೆ ಅತ್ಯಧಿಕ ದೇಣಿಗೆ (90 ದಾನಿಗಳಿಂದ 9,324 ಕೋಟಿ ರೂ) ಸಂದಿದೆ. ಆರೋಗ್ಯ ಸೇವೆ ಕ್ಷೇತ್ರಕ್ಕೆ 84 ದಾನಿಗಳು ಮತ್ತು ವಿಪತ್ತು ಪರಿಹಾರ ನಿಧಿಗೆ 41 ದಾನಿಗಳು ದೇಣಿಗೆ ನೀಡಿದ್ದಾರೆ.

ದೇಣಿಗೆ ನೀಡಿದವರಲ್ಲಿ 36 ದಾನಿಗಳು ಮುಂಬೈ ಮಹಾನಗರದವರು, 20 ದಿಲ್ಲಿಯವರು ಮತ್ತು 10 ಬೆಂಗಳೂರಿನ ದಾನಿಗಳು. ಫ್ಲಿಪ್‌ಕಾರ್ಟ್‌ನ ಸಹಸ್ಥಾಪಕ, 37 ವರ್ಷದ ಬಿನ್ನಿ ಬನ್ಸಾಲ್ ಅತ್ಯಂತ ಕಿರಿಯ ವಯಸ್ಸಿನ ದಾನಿಯಾಗಿದ್ದಾರೆ. ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ದೇಣಿಗೆ ನೀಡಿದ್ದು ಈ ಪಟ್ಟಿಯಲ್ಲಿ 1,500 ಕೋಟಿ ರೂ. ನೀಡಿರುವ ಟಾಟಾ ಸನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿ, 1,125 ಕೋಟಿ ರೂ. ನೀಡಿರುವ ಪ್ರೇಮ್‌ಜಿ ದ್ವಿತೀಯ ಮತ್ತು 510 ಕೋಟಿ ರೂ. ನೀಡಿರುವ ಅಂಬಾನಿ ತೃತೀಯ ಸ್ಥಾನದಲ್ಲಿದ್ದಾರೆ.

ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆ ನೀಡಿದವರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ (500 ಕೋಟಿ ರೂ), ಆದಿತ್ಯ ಬಿರ್ಲಾ ಗ್ರೂಪ್ (400 ಕೋಟಿ ರೂ.) ಪ್ರಮುಖವಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News