ಬಿಹಾರ: 5 ಸ್ಥಾನ ಗೆದ್ದ ಎಐಎಂಐಎಂ ಪಕ್ಷ

Update: 2020-11-10 15:51 GMT

ಪಾಟ್ನ, ನ.10: ಅಸಾದುದ್ದೀನ್ ಉವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷ ಬಿಹಾರದಲ್ಲಿ ಸೀಮಾಂಚಲ ಪ್ರದೇಶದಲ್ಲಿ ಉತ್ತಮ ಸಾಧನೆ ತೋರಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

2019ರಲ್ಲಿ ಬಿಹಾರದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ರಾಜ್ಯದಲ್ಲಿ ಖಾತೆ ತೆರೆದಿದ್ದ ಪಕ್ಷ ಈ ಬಾರಿಯ ಉಪಚುನಾವಣೆಯಲ್ಲಿ ಅವೌರ್, ಕೊಚಧಾಮಮ್, ಜೊಕಿಹಟ್, ಬೈಸಿ ಮತ್ತು ಬಹಾದುರ್‌ಗಂಜ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಸೀಮಾಂಚಲ ಪ್ರದೇಶದ 24 ಸ್ಥಾನಗಳಲ್ಲಿ 14 ಸ್ಥಾನಗಳಲ್ಲಿ ಎಐಎಂಐಎಂ ಸ್ಪರ್ಧಿಸಿ 5ರಲ್ಲಿ ಗೆಲುವು ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ಕುಶ್ವಾಹ ನೇತೃತ್ವದ ಆರ್‌ಎಲ್‌ಎಸ್ಪಿ, ಬಿಎಸ್‌ಪಿ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿತ್ತು.

ಎಐಎಂಐಎಂ ಪಕ್ಷ ಬಿಜೆಪಿಯ ‘ಬಿ’ ಟೀಂ ಆಗಿದ್ದು, ಈ ಪಕ್ಷ ಹೆಚ್ಚು ಮತ ಪಡೆದಂತೆಲ್ಲಾ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಚುನಾವಣೆಗೂ ಮುನ್ನ ವಿಪಕ್ಷಗಳು ಟೀಕಿಸಿದ್ದವು. ಮತ ಎಣಿಕೆ ಆರಂಭವಾಗಿ ಬಿಜೆಪಿ ಮತ್ತು ಜೆಡಿಯು ಮೇಲುಗೈ ಸಾಧಿಸುತ್ತಿರುವಂತೆಯೇ, ಮಹಾಮೈತ್ರಿಯ ಹಿನ್ನಡೆಗೆ ಉವೈಸಿಯೂ ಕಾರಣ ಎಂದು ಕಾಂಗ್ರೆಸ್ ಪುನರುಚ್ಚರಿಸಿದೆ. ಸುದ್ಧಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ನಮ್ಮನ್ನು ಗುರಿಯಾಗಿಸಲು ಬಿಜೆಪಿ ಉವೈಸಿಯನ್ನು ಬಳಸಿಕೊಂಡಿದೆ. ಬಿಹಾರದಲ್ಲಿ ನಮಗೆ ಗೆಲ್ಲುವ ಖಾತರಿಯಿತ್ತು. ಆದರೆ ಕೆಲವು ಸಣ್ಣಪಕ್ಷಗಳು ನಮಗೆ ದುಬಾರಿಯಾದವು. ಉವೈಸಿಯಿಂದಾಗಿ ನಮ್ಮ ಓಟುಗಳು ನಷ್ಟವಾದವು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News