ಬೆಂಗಳೂರಿನ ಒಕ್ಕಲಿಗರು ಬಿಜೆಪಿ ಜೊತೆ ಇದ್ದಾರೆ: ಆರ್.ಅಶೋಕ್

Update: 2020-11-10 18:43 GMT

ಬೆಂಗಳೂರು, ನ.10: ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಾತಿ ರಾಜಕಾರಣವನ್ನು ಮುಂದಿಟ್ಟುಕೊಂಡು ಆಟವಾಡಲು ಬಂದರು. ಆದರೆ, ಬೆಂಗಳೂರಿನ ಒಕ್ಕಲಿಗರು ಬಿಜೆಪಿ ಹಾಗೂ ಆರ್.ಅಶೋಕ್ ಜೊತೆಗಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಅವರಿಗೆ ರವಾನಿಸಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಈಗ ತನ್ನ ಸ್ಥಾನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಕನಕಪುರದ ಬಂಡೆಯನ್ನು ಡೈನಾಮೈಟ್ ಇಟ್ಟು ಉಡಾಯಿಸಿದ್ದೇವೆ ಎಂದು ವ್ಯಂಗ್ಯವಾಡಿದರು.

ಈ ಉಪ ಚುನಾವಣೆಯ ಫಲಿತಾಂಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಮತ್ತಷ್ಟು ಶಕ್ತಿ ಬಂದಿದ್ದು, ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿಪರ ಕೆಲಸಗಳನ್ನು ಮಾಡಲು ಸ್ಪೂರ್ತಿ ಸಿಕ್ಕಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಯಡಿಯೂರಪ್ಪ ಮುಂದಿನ ಎರಡೂವರೆ ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News