BREAKING NEWS : ಬಿಹಾರದಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ

Update: 2020-11-10 23:59 GMT

ಪಾಟ್ನಾ: ಹಲವು ನಾಟಕೀಯ ತಿರುವುಗಳನ್ನು ಕಂಡ ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಹೊರಬಿದ್ದಿದ್ದು, ಎನ್‌ಡಿಎ 125 ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಸ್ಪರ್ಧಿಸಿದ್ದ 110 ಸ್ಥಾನಗಳ ಪೈಕಿ 74ರಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸಾಧನೆ ಮಾಡಿದೆ. ಕಳೆದ ಬಾರಿ 80 ಸ್ಥಾನಗಳನ್ನು ಪಡೆದಿದ್ದ ಆರ್‌ಜೆಡಿ ಈ ಬಾರಿ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಅಂತಿಮ ಬಲಾಬಲ ಈ ಕೆಳಗಿನಂತಿದೆ

ಆರ್‌ಜೆಡಿ 75 (-5), ಬಿಜೆಪಿ 74 (+21), ಜೆಡಿಯು 43 (-28), ಕಾಂಗ್ರೆಸ್ 19 (-8), ಎಲ್‌ಜೆಪಿ 1(-1), ಇತರರು 31 (+21).
ಎನ್‌ಡಿಎ: 125 (ಬಿಜೆಪಿ 74, ಜೆಡಿಯು 43, ವಿಐಪಿ 4, ಎಚ್‌ಎಎಂ 4)
ಮಹಾಮೈತ್ರಿಕೂಟ: 110 (ಆರ್‌ಜೆಡಿ 75, ಕಾಂಗ್ರೆಸ್ 19, ಎಡ ಪಕ್ಷಗಳು 16).
ಎಐಎಂಐಎ-5, ಬಿಎಸ್ಪಿ-1, ಎಲ್‌ಜೆಪಿ-1, ಪಕ್ಷೇತರ-1

ಬಿಜೆಪಿಯ ಸಾಧನೆಯೊಂದಿಗೆ ಮತ್ತೆ ಎನ್‌ಡಿಎಗೆ ಜಯ ಸಿಕ್ಕಿದ್ದು, ಹದಿನಾಲ್ಕು ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯುವ ಆರ್‌ಜೆಡಿ ಕನಸು ನುಚ್ಚುನೂರಾಗಿದೆ. ಎನ್‌ಡಿಎ ಗೆಲುವಿನೊಂದಿಗೆ ನಿತೀಶ್ ಆರನೇ ಬಾರಿಗೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಕೇವಲ 19 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲು ಸಾಧ್ಯವಾಗಿದ್ದು, ಇದು ಆರ್‌ಜೆಡಿಯ ಆಸೆಗೆ ತಣ್ಣೀರೆರಚಿದೆ. ಇದಕ್ಕೆ ಪ್ರತಿಯಾಗಿ ಆರ್‌ಜೆಡಿಯ ಇತರ ಮಿತ್ರಪಕ್ಷಗಳು ಉತ್ತಮ ಸಾಧನೆ ಮಾಡಿದ್ದು, ಸಿಪಿಐ (ಎಂ-ಎಲ್) ಲಿಬರೇಶನ್ 12 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಸಿಪಿಐ ಹಾಗೂ ಸಿಪಿಎಂ ತಲಾ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News