ಬಿಹಾರ ಚುನಾವಣೋತ್ತರ ಸಮೀಕ್ಷೆಗಳು ತಪ್ಪಿದ್ದೆಲ್ಲಿ?

Update: 2020-11-11 04:24 GMT
ಫೈಲ್ ಫೋಟೊ

ಪಾಟ್ನಾ, ನ.11: ಬಿಹಾರ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳನ್ನು ರಾಜ್ಯದ ಫಲಿತಾಂಶ ಸುಳ್ಳಾಗಿಸಿದೆ. ಇದು ಹಲವು ರಾಜಕೀಯ ಪಂಡಿತರಲ್ಲಿ ಅಚ್ಚರಿ ಮೂಡಿಸಿದ್ದು, ಮತಗಟ್ಟೆ ಸಮೀಕ್ಷೆಗಳು ಎಲ್ಲಿ ಎಡವಿದವು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ.

ಬಹುತೇಕ ಸಮೀಕ್ಷೆಗಳು ತೇಜಸ್ವಿ ಯಾದವ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದವು. ಆರ್‌ಜೆಡಿ ಕೂಟ ಆರಂಭಿಕ ಮುನ್ನಡೆ ಗಳಿಸಿದರೂ ಕ್ರಮೇಣ ನಿಕಟ ಸ್ಪರ್ಧೆಯಲ್ಲಿ ಹಿನ್ನಡೆ ಸಾಧಿಸಿತು. ಕೆಲ ಕ್ಷೇತ್ರಗಳಲ್ಲಂತೂ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿತು.

ಬಹುತೇಕ ಸಮೀಕ್ಷೆಗಳಲ್ಲಿ ಮತ ಗಳಿಕೆ ಪ್ರಮಾಣವನ್ನು ಅಂದಾಜಿಸಿ ಅಲ್ಗೋರಿಥಮ್ ಬಳಸಿಕೊಂಡು ಅದನ್ನು ಸ್ಥಾನಗಳಾಗಿ ಪರಿವರ್ತಿಸುತ್ತವೆ. ಕೆಲವೊಮ್ಮೆ ಈ ಪರಿವರ್ತನೆ ತಪ್ಪು ಅಂದಾಜಿಸುವಿಕೆಗೆ ಕಾರಣವಾಗುತ್ತದೆ. ಈ ಬಾರಿ ಹಲವು ಸಮೀಕ್ಷೆಗಳು ಅಂದಾಜಿಸಿದ್ದ ಮತಗಳಿಕೆ ಪ್ರಮಾಣ ಕೂಡಾ ತಪ್ಪಾಗಿದೆ.

ಉದಾಹರಣೆಗೆ ಟುಡೇಸ್ ಚಾಣಕ್ಯ ಸಮೀಕ್ಷೆ, ಮಹಾಮೈತ್ರಿಕೂಟ ಶೇಕಡ 44ರಷ್ಟು ಮತ ಗಳಿಕೆಯೊಂದಿಗೆ 180 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಎನ್‌ಡಿಎ ಮತಗಳಿಗೆ ಶೇಕಡ 34ರಷ್ಟಾಗಲಿದೆ ಎಂದು ಅಂದಾಜಿಸಿತ್ತು. ಟೈಮ್ಸ್ ನೌ- ಸಿ ವೋಟರ್ ನಿರ್ಗಮನ ಸಮೀಕ್ಷೆಯಲ್ಲಿ ಮಹಾಮೈತ್ರಿ ಕೂಟಕ್ಕೆ 120 ಸ್ಥಾನಗಳನ್ನು ಮತ್ತು ರಿಪಬ್ಲಿಕ್ ಟಿವಿ- ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಮೈತ್ರಿಕೂಟಕ್ಕೆ 118-138 ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಮೂರು ಪ್ರಮುಖ ಅಂಶಗಳು ಮತದಾನೋತ್ತರ ಸಮೀಕ್ಷೆಗಳನ್ನು ತಿರುಚಿವೆ ಎನ್ನುವುದು ತಜ್ಞರ ಅಭಿಮತ. ಒಂದನೆಯದು ಕಾಲಘಟ್ಟ. ಮೊದಲ ಹಂತದ ಚುನಾವಣೆ ಬಳಿಕ ಎನ್‌ಡಿಎ ಚೇತರಿಸಿಕೊಂಡಿತ್ತು. ಎರಡನೆಯದಾಗಿ ಎನ್‌ಡಿಎಗೆ ಹೆಚ್ಚಾಗಿ ಮತ ಹಾಕಿದ ಮಹಿಳೆಯರ ಪ್ರಾತಿನಿಧ್ಯ ಮತಗಟ್ಟೆ ನಿರ್ಗಮನ ಸಮೀಕ್ಷೆಯಲ್ಲಿ ಇಲ್ಲದಿದ್ದುದು ಹಾಗೂ ಕೊನೆಯದಾಗಿ, ದೊಡ್ಡ ಸಂಖ್ಯೆಯ ಮೌನ ಮತದಾರರಿಗೆ ಸಮೀಕ್ಷೆಗಳು ಪ್ರಾತಿನಿಧ್ಯ ನಿಡದಿದ್ದುದು. ಈ ವರ್ಗ ಕೂಡಾ ಎನ್‌ಡಿಎಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News