ಕಾರ್ಖಾನೆಯಲ್ಲಿ ಅಗ್ನಿ ದುರಂತ ಪ್ರಕರಣ: ಸಮಗ್ರ ತನಿಖೆಗೆ ಆದೇಶ- ಬಸವರಾಜ ಬೊಮ್ಮಾಯಿ

Update: 2020-11-11 14:00 GMT

ಬೆಂಗಳೂರು, ನ.11: ನಗರದ ಮೈಸೂರು ರಸ್ತೆಯಲ್ಲಿನ ರೇಖಾ ಕಾರ್ಖಾನೆಯಲ್ಲಿ ಅಗ್ನಿ ದುರಂತ ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ನಡೆಸಲು ಬಿಬಿಎಂಪಿ, ಅಗ್ನಿಶಾಮಕ ಇಲಾಖೆ, ಪರಿಸರ ಇಲಾಖೆಗಳಿಂದ ಕಂಪೆನಿಯ ಮಾಲಕರು ಅನುಮತಿ ಪಡೆದಿದ್ದಾರೆಯೇ ಎನ್ನುವುದರ ಬಗ್ಗೆ ತನಿಖೆ ನಡೆಸಲು ಆಯುಕ್ತರಿಗೆ ಸೂಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೊಳ್ಳಲಾಗುವುದು ಎಂದು ಹೇಳಿದರು.

ಕಾರ್ಖಾನೆ ದುರಂತದಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸದಂತೆ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಅವರು, 48 ಅಗ್ನಿಶಾಮಕ ವಾಹನಗಳನ್ನು ಬಳಸಿ ಬೆಂಕಿ ನಂದಿಸಲಾಗಿದೆ. ಗೋದಾಮಿನಲ್ಲಿ ಸ್ಪೋಟಕ ಮತ್ತು ಅಪಾಯಕಾರಿ ವಸ್ತುಗಳನ್ನಿಡಲು ಅನುಮತಿ ಇರುವ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದರು.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗೆ ಗಾಯ

ಕಾರ್ಯಾಚರಣೆಯಲ್ಲಿ ತೊಡಗಿರುವ ಎಂಟು ಜನ ಅಗ್ನಿಶಾಮಕ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಇನ್‍ಸ್ಪೆಕ್ಟರ್ ಗಳಾದ ರೇವಣ್ಣ ಸಿದ್ದಪ್ಪ(36), ಸಂಪತ್‍ ರಾಜ್(35) ಸಿದ್ದೇಗೌಡ(34), ಜಿ. ಕೃಷ್ಣಸ್ವಾಮಿ ಹಾಗೂ ಹೆಡ್ ಕಾನ್‍ಸ್ಟೇಬಲ್ ಸೋಮಶೇಖರ್, ಫೈರ್ ಮ್ಯಾನ್ ಸೋಮನಾಥ್, ಆನಂದ್, ಕೋಟ್ರೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ತನಿಖೆ ಚುರುಕು

ಹೊಸಗುಡ್ಡದಹಳ್ಳಿ ಬಳಿ ನಡೆದ ಕೆಮಿಕಲ್ ಫ್ಯಾಕ್ಟರಿ ಬೆಂಕಿ ದುರಂತ ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಸಜ್ಜಾನ್ ಹಾಗೂ ಕಮಲಾ ಎಂಬುವರು ಪ್ರಕರಣ ದಾಖಲಿಸಿದ್ದು, ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News