‘ಶಾದಿ ಭಾಗ್ಯ’ ಮರು ನಾಮಕರಣದೊಂದಿಗೆ ಜಾರಿ ಮಾಡಲು ಸರಕಾರಕ್ಕೆ ಮನವಿ: ಅಬ್ದುಲ್ ಅಝೀಮ್

Update: 2020-11-11 14:37 GMT

ಬೆಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಜಾರಿಯಲ್ಲಿದ್ದ ಶಾದಿ ಭಾಗ್ಯ(ಬಿದಾಯಿ) ಯೋಜನೆಯನ್ನು ಮರು ನಾಮಕರಣಗೊಳಿಸಿ, ಸಮಾಜದ ಎಲ್ಲ ವರ್ಗಗಳಿಗೂ ಅನ್ವಯಿಸುವಂತೆ ಪುನಃ ಜಾರಿಗೆ ತರುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ತಿಳಿಸಿದರು.

ಬುಧವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾದಿ ಭಾಗ್ಯ ಎಂಬ ಹೆಸರಿನಿಂದಾಗಿ ಸಮಾಜದಲ್ಲಿ ತಾರತಮ್ಯದ ಭಾವನೆ ಮೂಡಿತ್ತು. ಆದುದರಿಂದ, ಈ ಯೋಜನೆಯನ್ನು ಮರು ನಾಮಕರಣಗೊಳಿಸಿ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತೆ ಜಾರಿಗೆ ತರಬೇಕಾದ ಅಗತ್ಯವಿದೆ ಎಂದರು.

ಕಾಂಗ್ರೆಸ್ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಸಮಾಜದಲ್ಲಿ ಗೊಂದಲ, ತಾರತಮ್ಯ ತೆಗೆದು ಹಾಕುವ ದೃಷ್ಟಿಯಿಂದ ಬಿಜೆಪಿ ಸರಕಾರ ಇದನ್ನು ಸ್ಥಗಿತಗೊಳಿಸಿತ್ತು. ಬಡ ವರ್ಗದ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಈ ಯೋಜನೆಯನ್ನು ಪುನಃ ಜಾರಿಗೆ ತರುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅಬ್ದುಲ್ ಅಝೀಮ್ ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ರಾಜ್ಯ ಪ್ರವಾಸವನ್ನು ಡಿಸೆಂಬರ್ 1ರಿಂದ ಪುನಃ ಆರಂಭಿಸಲಾಗುವುದು. ಈ ವೇಳೆ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ನನ್ನಜೊತೆಯಲ್ಲಿ ಕರೆದುಕೊಂಡು, ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಅಬ್ದುಲ್ ಅಝೀಮ್ ಹೇಳಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ 20 ಲಕ್ಷ ರೂ.ಗಳ ವಿದ್ಯಾರ್ಥಿ ವೇತನವನ್ನು ಈ ಹಿಂದಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಎ.ಬಿ.ಇಬ್ರಾಹಿಮ್ ಅವರ ಸಲಹೆಯಿಂದಾಗಿ ರಾಜ್ಯ ಸರಕಾರ ರದ್ದುಗೊಳಿಸಿತು. ಇಬ್ರಾಹಿಮ್ ಅವರ ದುಡುಕಿನ ಸಲಹೆಯಿಂದ ಸಮಾಜ ನಷ್ಟ ಅನುಭವಿಸಿದೆ.

-ಅಬ್ದುಲ್ ಅಝೀಮ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News