ಬೆಂಗಳೂರಿನಲ್ಲಿ ಸಾಮೂಹಿಕ ದೀಪಾವಳಿ ಆಚರಣೆ ನಿಷೇಧ

Update: 2020-11-12 13:55 GMT

ಬೆಂಗಳೂರು, ನ.12: ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಬಿಬಿಎಂಪಿ ಸಾಮೂಹಿಕವಾಗಿ ದೀಪಾವಳಿ ಆಚರಣೆಯನ್ನು ನಿಷೇಧಿಸಿದೆ.

ಕೋವಿಡ್ ಹಿನ್ನೆಲೆ ಹಸಿರು ದೀಪಾವಳಿ ಆಚರಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ರಾಜಧಾನಿಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ. ಹಸಿರು ಪಟಾಕಿ ಹೊರತುಪಡಿಸಿ ಯಾವುದೇ ಪಟಾಕಿಗಳ ಮಾರಾಟಕ್ಕೆ ಮತ್ತು ಸಿಡಿಸಲು ಅವಕಾಶ ಇಲ್ಲ. ಒಂದು ವೇಳೆ, ಸರಕಾರ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ ಪಟಾಕಿ ಸಿಡಿಸುತ್ತೇವೆ ಎಂದು ಹಠಕ್ಕೆ ಬಿದ್ದರೆ ದುಬಾರಿ ದಂಡ ತೆರಬೇಕಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಕೇಂದ್ರ ಸರಕಾರದ ಸಿಎಸ್‍ಐಆರ್, ನೀರಿ ಸಂಸ್ಥೆಗಳಿಂದ ಅಧ್ಯಯನಕ್ಕೊಳಪಟ್ಟು ಅಭಿವೃದ್ಧಿಪಡಿಸಲಾದ ಪಟಾಕಿಗಳಿಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅಧಿಕೃತ ಪಟಾಕಿ ಮಾರಾಟಗಾರರು, ವಿತರಕರು ಯಾರು ಇದ್ದಾರೋ ಅಂತಹವರು ಸರ್ಟಿಫಿಕೆಟ್ ತೋರಿಸಿದ ಮೇಲೆ ಅಂಗಡಿ ಇಡಲು ಅನುಮತಿ ನೀಡಲಾಗುತ್ತದೆ. ಎಲ್ಲೆಲ್ಲಿ ಅಂಗಡಿಗಳು ಇಡಬೇಕು ಎಂಬುದನ್ನು ಗುರುತಿಸಿ ಮೈದಾನಗಳ ಪಟ್ಟಿಯನ್ನು ಪೊಲೀಸ್ ಆಯುಕ್ತರಿಗೆ ನೀಡಲಾಗಿದೆ.

ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿಯೇ ಅನುಮತಿ ನೀಡಲಾಗುತ್ತದೆ. ಅನುಮತಿ ಇಲ್ಲದೇ ಪಟಾಕಿ ಮಾರಾಟ ಮಾಡಿದರೆ ಅಂತಹವರ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಮಾರ್ಷಲ್ಸ್ ಮತ್ತು ಪೊಲೀಸರು ನಗರದಾದ್ಯಂತ ಕಾರ್ಯಾಚರಣೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News