ಆಸ್ಪತ್ರೆಗಳ ಐಸಿಯುನ ಶೇ. 80 ಹಾಸಿಗೆ ಕೊರೋನ ರೋಗಿಗಳಿಗೆ ಮೀಸಲಿರಿಸಲು ದಿಲ್ಲಿ ಸರಕಾರಕ್ಕೆ ಹೈಕೋರ್ಟ್ ಅನುಮತಿ

Update: 2020-11-12 15:21 GMT

ಹೊಸದಿಲ್ಲಿ, ನ. 12: ಮೂವತ್ತ ಮೂರು ಖಾಸಗಿ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಶೇ. 80ರಷ್ಟು ಹಾಸಿಗೆಗಳನ್ನು ಕೊರೋನ ರೋಗಿಗಳಿಗೆ ಮೀಸಲಿರಿಸಲು ಅರವಿಂದ ಕೇಜ್ರಿವಾಲ್ ನೇತೃತ್ವದ ಸರಕಾರಕ್ಕೆ ದಿಲ್ಲಿ ಹೈಕೋಟ್ ಗುರುವಾರ ಅನುಮತಿ ನೀಡಿದೆ.

ದಿಲ್ಲಿಯಲ್ಲಿ ವೆಂಟಿಲೇಟರ್ ಇರುವ ತೀವ್ರ ನಿಗಾ ಘಟಕದ ಹಾಸಿಗೆಗಳ ಸಂಖ್ಯೆ ಸಾರ್ವಕಾಲಿಕ ಇಳಿಕೆಯಾಗಿದೆ. ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟಾಗಿ ಲಭ್ಯವಿರುವ ಹಾಸಿಗೆಗಳು ಶೇ. 13 ಮಾತ್ರ. ಹೆಚ್ಚಿನ ಪ್ರಮುಖ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಹಲವು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಹಾಗೂ ವೆಂಟಿಲೇಟರ್ ಸೌಲಭ್ಯ ಇರುವ ಒಂದೊಂದು ಹಾಸಿಗೆಗಳು ಮಾತ್ರ ಖಾಲಿ ಇವೆ. ಹೊಸದಿಲ್ಲಿಯ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ವೆಂಟಿಲೇಟರ್ ಇರುವ ಒಟ್ಟು 1,283 ಹಾಸಿಗೆಗಳು ಇವೆ. ಇದರಲ್ಲಿ 1,119 (ಶೇ.87) ಹಾಸಿಗೆಗಳಲ್ಲಿ ರೋಗಿಗಳು ದಾಖಲಾಗಿದ್ದಾರೆ. ಕೇವಲ 164 (ಶೇ. 13) ಹಾಸಿಗೆಗಳು ಮಾತ್ರ ಖಾಲಿ ಇವೆ. ಸರಕಾರಿ ಆಸ್ಪತ್ರೆಗಳ ತೀವ್ರ ನಿಗಾ ಘಟಕದ ವೆಂಟಿಲೇಟರ್ ಸೌಲಭ್ಯ ಇರುವ 809 ಹಾಸಿಗೆಗಳು ಇವೆ. ಇದರಲ್ಲಿ ಕೇವಲ 99 ಹಾಸಿಗೆಗಳು ಮಾತ್ರ ಖಾಲಿ ಇವೆ. ಖಾಸಗಿ ಆಸ್ಪತ್ರೆಗಳ ವೆಂಟಿಲೇಟರ್ ಇರುವ ತೀವ್ರ ನಿಗಾ ಘಟಕದ 474 ಹಾಸಿಗೆಗಳು ಇವೆ.

ಇದರಲ್ಲಿ ಕೇವಲ 65 ಹಾಸಿಗೆಗಳು ಮಾತ್ರ ಬಾಕಿ ಇವೆ. ದಿಲ್ಲಿಯಲ್ಲಿ 24 ಗಂಟೆಗಳಲ್ಲಿ 8,593 ಕೊರೋನ ರೋಗಿಗಳನ್ನು ದಾಖಲಿಸಲಾಗಿದೆ. ಸಾವಿನ ಸಂಖ್ಯೆ 85 ದಾಖಲಾಗಿದೆ ಎಂದು ಬುಧವಾರ ಆರೋಗ್ಯ ಸಚಿವಾಲಯ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News