ಮೂಡಿಸ್‌ನಿಂದ ಭಾರತದ ಜಿಡಿಪಿ ಬೆಳವಣಿಗೆಯ ಕುಸಿತದ ಅಂದಾಜು ಮೈನಸ್ ಶೇ.9.6ರಿಂದ ಮೈನಸ್ ಶೇ.8.9ಕ್ಕೆ ಪರಿಷ್ಕರಣೆ

Update: 2020-11-12 16:43 GMT

ಹೊಸದಿಲ್ಲಿ,ನ.12: ರೇಟಿಂಗ್ ಸಂಸ್ಥೆ ಮೂಡಿಸ್ 2020ನೇ ಕ್ಯಾಲೆಂಡರ್ ವರ್ಷಕ್ಕೆ ಭಾರತದ ಜಿಡಿಪಿ ಪ್ರಗತಿ ದರದ ಸಂಕುಚನದ ಅಂದಾಜನ್ನು ಈ ಮೊದಲಿನ ಮೈನಸ್ ಶೇ.9.6ರಿಂದ ಮೈನಸ್ ಶೇ.8.9ಕ್ಕೆ ಪರಿಷ್ಕರಿಸಿದೆ. ಇದೇ ವೇಳೆ ಅದು 2021ನೇ ಕ್ಯಾಲೆಂಡರ್ ವರ್ಷಕ್ಕೆ ಭಾರತದ ಜಿಡಿಪಿ ಪ್ರಗತಿ ದರವನ್ನು ಈ ಮೊದಲು ಬಿಂಬಿಸಿದ್ದ ಶೇ.8.1ರಿಂದ ಶೇ.8.6ಕ್ಕೆ ಹೆಚ್ಚಿಸಿದೆ.

ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವುದು ಬೆಳವಣಿಗೆಯ ಹಿಂದಿನ ಕಾರಣವಾಗಿದೆ ಎಂದು ಮೂಡಿಸ್ ಇನ್ವೆಸ್ಟರ್ ಸರ್ವಿಸ್ ತನ್ನ ವರದಿಯಲ್ಲಿ ತಿಳಿಸಿದೆ.

ಕೋವಿಡ್ ಪಾಸಿಟಿವಿಟಿ ದರ ಭಾರತದಲ್ಲಿ ಶೇ.5ಕ್ಕಿಂತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಶೇ.10ಕ್ಕಿಂತ ಕಡಿಮೆಯಾಗಿದೆ. ಶ್ರೀಮಂತ ರಾಷ್ಟ್ರಗಳಲ್ಲಿ ಕಂಡು ಬಂದಿರುವಂತೆ ಹೆಚ್ಚಿನ ಉದಯೋನ್ಮುಖ ಆರ್ಥಿಕತೆಗಳಲ್ಲಿಯೂ ಸಾವಿನ ದರ ಕ್ರಮೇಣ ಕಡಿಮೆಯಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಕ್ರಮೇಣ ಹೆಚ್ಚಿನ ಚಲನವಲನಗಳು ಮತ್ತು ಸಾಮಾಜಿಕ ಸಂವಹನಗಳು ನಡೆಯಲಿವೆ. ಜೊತೆಗೆ ಲಸಿಕೆಯ ಅಭಿವೃದ್ಧಿ ಮತ್ತು ವಿತರಣೆಯು 2021 ಮತ್ತು 2022ರಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಆತಂಕವನ್ನು ತಗ್ಗಿಸಲಿದೆ ಎಂದು ವರದಿಯು ಹೇಳಿದೆ.

ಸುದೀರ್ಘ ಮತ್ತು ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.24ರಷ್ಟು ಬೃಹತ್ ಕುಸಿತವನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News